ಕಾಮ ಪುರಾಣದಿಂದ ಪ್ರಸಿದ್ಧಿಪಡೆದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ದೇಶಬಿಟ್ಟು ಪರಾರಿಯಾಗಿದ್ದು, ಸದ್ಯ ತಾವೇ ಸೃಷ್ಠಿಸಿಕೊಂಡಿರುವ `ಕೈಲಾಸ’ದ ದೇಶದ ಸದಸ್ಯತ್ವಪಡೆಯುವಂತೆ ಜನರ ಬೆನ್ನು ಬಿದ್ದಿದ್ದಾರೆ. ಕೈಲಾಸದ ಸದಸ್ಯತ್ವ ಅಭಿಯಾನದ ಪ್ರಚಾರಕ್ಕಾಗಿ ಉತ್ತರ ಕನ್ನಡ ಜಿಲ್ಲೆಗೆ ತಮ್ಮ ಭಕ್ತರನ್ನು ಕಳುಹಿಸಿದ್ದಾರೆ. ನಿತ್ಯಾನಂತ ಸ್ವಾಮಿಯ ಪಾದುಕೆಹಿಡಿದ ಭಕ್ತೆಯೊಬ್ಬರು ಶನಿವಾರ ಗೋಕರ್ಣದಲ್ಲಿ ಕಾಣಿಸಿಕೊಂಡಿದ್ದಾರೆ!
`ಆಸ್ಟೇಲಿಯಾ ಪಕ್ಕದಲ್ಲಿ ಕೈಲಾಸ ದೇಶವಿದೆ. ಅಲ್ಲಿಂದ ನಾವು ಬಂದಿದ್ದೇವೆ. ಕೈಲಾಸ ದೇಶದ ಸದಸ್ಯತ್ವಪಡೆದು ನಿತ್ಯಾನಂದ ಸ್ವಾಮೀ ಸೇವೆಗೆ ನೀವು ಬನ್ನಿ’ ಎಂದು ನಿತ್ಯಾನಂದ ಸ್ವಾಮೀಜಿಯ ಅನುಯಾಯಿಗಳು ಹೇಳುತ್ತಿದ್ದಾರೆ. ನಿತ್ಯಾನಂದ ಸ್ವಾಮೀಜಿಯ ಫೋಟೋ ಹಿಡಿದು ಸಂಚಾರ ನಡೆಸಿದ ಅವರು ಸಿಕ್ಕ ಸಿಕ್ಕವರಿಗೆಲ್ಲ ನಿತ್ಯಾನಂದನ ಮಹಿಮೆ ಗುಣಗಾನ ಮಾಡುವ ಪುಸ್ತಕ ಹಾಗೂ ಸದಸ್ಯತ್ವ ಅರ್ಜಿ ಕೊಡುತ್ತಿದ್ದಾರೆ. ಮಹಿಳೆಯ ಜೊತೆ ಇನ್ನಿಬ್ಬರು ಪುರುಷರು ಸಹ ಕಾಣಿಸಿಕೊಂಡಿದ್ದು, ಅವರು ಎಲ್ಲಡೆ ಸಂಚರಿಸಿ ನಿತ್ಯಾನಂದ ಸ್ವಾಮಿಯ ಗುಣಗಾನ ಮಾಡುತ್ತಿದ್ದಾರೆ.
`ಭಾರತದ ಎಲ್ಲಡೆ ಸಂಚರಿಸಿ ಆದ್ಯಾತ್ಮಿಕ ವಿಚಾರಗಳ ಬಗ್ಗೆ ಪ್ರಚಾರ ಮಾಡುತ್ತೇವೆ. ಕೈಲಾಸಕ್ಕೆ ಬರಲು ಆಸಕ್ತರಾದವರನ್ನು ಅಲ್ಲಿ ಕರೆಯಿಸಿಕೊಳ್ಳುತ್ತೇವೆ. ಆ ದೇಶದ ನಾಗರಿಕತೆಪಡೆಯಲು ಬೇಕಾದ ವಿವರಗಳ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ’ ಎಂದು ನಿತ್ಯಾನಂದನ ಭಕ್ತರು ಹೇಳಿದರು. ಇದಕ್ಕೆ ಪೂರಕವಾಗಿ `ನಿತ್ಯಾನಂದ ಮಹಾತ್ಮೆ’ಯ ಪುಸ್ತಕಗಳನ್ನು ಹಂಚಿದರು. ಕೈಲಾಸದಲ್ಲಿನ ಚಟುವಟಿಕೆಗಳು ಹಾಗೂ ಅಲ್ಲಿನ ವಿಶೇಷಗಳ ಬಗ್ಗೆ ಅವರು ಪ್ರಚಾರ ಮಾಡಿದರು. ಹಿಂದಿ ಭಾಷೆ ಮಾತನಾಡುವ ಆ ಮೂವರು ಉತ್ತರ ಭಾರತದವರ ಹಾಗೇ ಕಾಣಿಸಿದ್ದು, ಹಲವು ತಿಂಗಳಿನಿAದ ಯಾತ್ರೆ ಶುರು ಮಾಡಿರುವುದಾಗಿ ಹೇಳಿಕೊಂಡರು. ಅವರ ಊರು, ವಿಳಾಸದ ಬಗ್ಗೆ ಪ್ರಶ್ನಿಸಿದಾಗ ಆ ಮಾಹಿತಿ ನೀಡದೇ ಕಾಲ್ಕಿತ್ತರು.