ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ಮಾರ್ಗವಾಗಿ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರಿನಿoದ ಗ್ಯಾಸ್ ಸೋರಿಕೆಯಾಗಿದ್ದು, ಶನಿವಾರ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಪ್ರಯಾಣಿಕರು ಸಮಸ್ಯೆ ಅನುಭವಿಸಿದರು.
ತಂಬೂರು ಕ್ರಾಸಿನ ಬಳಿ ಗ್ಯಾಸ್ ಟ್ಯಾಂಕರಿನಲ್ಲಿ ಸಮಸ್ಯೆ ಕಾಣಿಸಿತು. ಗ್ಯಾಸ್ ಸೋರಿಕೆ ಹಿನ್ನಲೆ ಆ ಮಾರ್ಗವಾಗಿ ಸಂಚರಿಸುವ ಎಲ್ಲಾ ವಾಹನಗಳನ್ನು ಪೊಲೀಸರು ತಡೆದರು. ಈ ಹಿನ್ನಲೆ ಯಲ್ಲಾಪುರದಲ್ಲಿಯೂ ವಾಹನಗಳು ಸಾಲಿನಲ್ಲಿ ನಿಂತಿದ್ದು, ನಂತರ ಹಳಿಯಾಳ ಮಾರ್ಗವಾಗಿ ಆ ವಾಹನಗಳನ್ನು ಹುಬ್ಬಳ್ಳಿಗೆ ಕಳುಹಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದ್ದರಿಂದ ಯಲ್ಲಾಪುರದಿಂದ ಹುಬ್ಬಳ್ಳಿಗೆ ಹೋಗಬೇಕಿದ್ದ ಪ್ರಯಾಣಿಕರು ಹಳಿಯಾಳ ಕ್ರಾಸಿನಲ್ಲಿ ತಿರುವುಪಡೆದು ಅಲ್ಲಿಂದ ಹಳಿಯಾಳಕ್ಕೆ ಹೋಗಿ ಹುಬ್ಬಳ್ಳಿಗೆ ಹೊರಟರು. ಇನ್ನೂ ಕೆಲವರು ಯಲ್ಲಾಪುರದಿಂದ ಮುಂಡಗೋಡಿಗೆ ಹೋಗಿ ಅಲ್ಲಿಂದ ಹುಬ್ಬಳ್ಳಿಗೆ ಹೋಗುವ ದಾರಿ ಆಯ್ಕೆ ಮಾಡಿಕೊಂಡರು. ಶನಿವಾರ ಬೆಳಗ್ಗೆಯೇ ಗ್ಯಾಸ್ ಸೋರಿಕೆ ಬಗ್ಗೆ ಮಾಹಿತಿ ಬಂದಿದ್ದರಿAದ ಎಲ್ಲಡೆ ಕಟ್ಟೆಚ್ಚರವಹಿಸಲಾಗಿತ್ತು.
ಸಂಜೆಯ ವೇಳೆಗೆ ಪರ್ಯಾಯ ವ್ಯವಸ್ಥೆ ಆಗಿದ್ದು, ಸುಗಮ ಸಂಚಾರಕ್ಕೆ ದಾರಿ ಸಿಕ್ಕಿತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಜೊತೆ ವಿವಿಧ ರಕ್ಷಣಾ ತಂಡದವರು ಗ್ಯಾಸ್ ಸೋರಿಕೆ ಸ್ಥಳದಲ್ಲಿದ್ದು ಮುನ್ನಚ್ಚರಿಕೆವಹಿಸಿದ್ದರು.