ಜಾಗ ಹಾಗೂ ಅಲ್ಲಿ ಅಳವಡಿಸಿದ ಬೇಲಿ ವಿಷಯವಾಗಿ ಕುಮಟಾದಲ್ಲಿ ಮಹಿಳೆಯರಿಬ್ಬರ ನಡುವೆ ಜಗಳ-ಹೊಡೆದಾಟ ನಡೆದಿದ್ದು, ವಿದೇಶದಲ್ಲಿರುವ ವ್ಯಕ್ತಿಯೊಬ್ಬರು ಈ ಹೊಡೆದಾಟ ದೃಶ್ಯವನ್ನು ಸಿಸಿ ಕ್ಯಾಮರಾದಲ್ಲಿ ನೋಡಿದ್ದಾರೆ. ಹೊಡೆದಾಟದಲ್ಲಿ ಭಾಗಿಯಾದ ಮಹಿಳೆಯೊಬ್ಬರು ಸಿಸಿ ಕ್ಯಾಮರಾದ ದೃಶ್ಯಾವಳಿ ನೋಡಿದವರ ವಿರುದ್ಧವೂ ಕಾನೂನು ಕ್ರಮಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕುಮಟಾ ಕಲಾವೆ ಸೊಪ್ಪಿನ ಹೊಸಳ್ಳಿಯ ಶಾಂತಿ ವ್ಯಾಲೆಂತ್ ಪಿಂಟೋ ಹಾಗೂ ಅವರ ಪಕ್ಕದ ಮನೆಯ ಪ್ರೇಮಾ ಕಿರಣ ಪಿಂಟೋ ಅವರ ನಡುವೆ ಮಾರಾಮಾರಿ ನಡೆದಿದೆ. ಈ ಹೊಡೆದಾಟಕ್ಕೆ ಶಾಂತಿ ಪಿಂಟೋ ಅವರ ಜೊತೆ ಅವರ ಅಣ್ಣ ಜಾನಿ ಸಾವೇರ್ ಫರ್ನಾಂಡಿಸ್ ಅವರು ಕೈ ಜೋಡಿಸಿದ್ದಾರೆ. ಪ್ರೇಮಾ ಪಿಂಟೋ ಅವರಿಗೆ ಸಂದೀಪ ಸಂತ ಪಿಂಟೋ ಹಾಗೂ ಉಲ್ಲಾಸ ರೋಜಾರಿಯೋ ಅವರು ಸಹಾಯ ಮಾಡಿದ್ದಾರೆ. ಪ್ರೇಮಾ ಪಿಂಟೋ ಅವರ ಗಂಡನ ಸಹೋದರ ವಾಲೆಂತ್ ಜಾಕಿ ಪಿಂಟೋ ಅವರು ಇಸ್ರೇಲಿನಲ್ಲಿದ್ದು, ಸಿಸಿ ಕ್ಯಾಮರಾದಲ್ಲಿ ಅವರು ಜಗಳ ನೋಡಿದ್ದಾರೆ. ಅದಾದ ನಂತರ ಕ್ಯಾಮರಾ ಮೂಲಕವೇ ಅವರು ಬುದ್ದಿವಾದ ಹೇಳುವ ಪ್ರಯತ್ನ ಮಾಡಿದ್ದು, ಇದನ್ನು ಸಹಿಸದ ಪ್ರೇಮಾ ಪಿಂಟೋ ಅವರು ವಾಲೆಂತ್ ಪಿಂಟೋ ಅವರ ವಿರುದ್ಧವೂ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಕಲಾವೆ ಸೊಪ್ಪಿನಹೊಸಳ್ಳಿಯಲ್ಲಿ ವಾಸವಾಗಿರುವ ಶಾಂತಿ ಪಿಂಟೋ ಅವರು ತಮ್ಮ ಮನೆ ಸುತ್ತಲು ತಂತಿ ಬೇಲಿ ಮಾಡಿದ್ದಾರೆ. ಅವರ ಪಕ್ಕದ ಮನೆಯ ಪ್ರಾಮೇ ಪಿಂಟೋ ಅವರು ತಮ್ಮ ಮನೆ ಬಳಿ ಅಂಗಡಿ ನಿರ್ಮಿಸಲು ಉದ್ದೇಶಿಸಿದ್ದು, ಮಾರ್ಚ 27ರಂದು ಕಲ್ಲು ಸಾಗಾಟಕ್ಕೆ ಪ್ರಯತ್ನಿಸಿದ್ದಾರೆ. ಆದರೆ, ತಂತಿ ಬೇಲಿ ಅಡ್ಡವಾಗಿದ್ದರಿಂದ ಆ ಬೇಲಿ ತೆಗೆಯುವಂತೆ ಅವರು ಶಾಂತಿ ಪಿಂಟೋ ಅವರಿಗೆ ವಿನಂತಿಸಿದ್ದಾರೆ. ಇದಕ್ಕೆ ಶಾಂತಿ ಪಿಂಟೋ ಅವರು ಒಪ್ಪದ ಕಾರಣ ವಾಗ್ವಾದ ನಡೆದಿದೆ. ಅದು ಹೊಡೆದಾಟದ ಸ್ವರೂಪಪಡೆದಿದೆ. ಶಾಂತಿ ಪಿಂಟೋ ಅವರು ತಮ್ಮ ಅಣ್ಣ ಜಾನಿ ಫರ್ನಾಂಡಿಸ್ ಅವರಿಗೆ ಫೋನ್ ಮಾಡಿ ಕರೆಯಿಸಿದ್ದು, ಜಾನಿ ಪಿಂಟೋ ಅವರು ಪ್ರೇಮಾ ಪಿಂಟೋ ಅವರ ಮೇಲೆ ಕೈ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರೇಮಾ ಪಿಂಟೋ ಅವರು ಕಿರಣ ಪಿಂಟೋ ಅವರನ್ನು ಕರೆದಿದ್ದು, ಅವರು ಶಾಂತಿ ಪಿಂಟೋ ಅವರ ಕೈಯಲ್ಲಿದ್ದ ಮೊಬೈಲ್ ಕಸಿದು ಅದರಿಂದಲೇ ಹಣೆಗೆ ಹೊಡೆದಿದ್ದಾರೆ. ಈ ಹೊಡೆದಾಟದಲ್ಲಿ ಪ್ರೇಮಾ ಪಿಂಟೋ ಅವರಿಗೂ ಕಟ್ಟಿಗೆಯಿಂದ ಒದೆ ಬಿದ್ದಿದೆ.
ಈ ಎಲ್ಲಾ ಹೊಡೆದಾಟದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಸ್ರೇಲಿನಿಂದಲೇ ಸಿಸಿ ಕ್ಯಾಮರಾ ನೋಡಿದ ಪ್ರೇಮಾ ಪಿಂಟೋ ಅವರ ಗಂಡನ ತಮ್ಮ ವಾಲೆಂತ್ ಪಿಂಟೋ ಬುದ್ದಿ ಹೇಳಿದ್ದಾರೆ. ಇದನ್ನು ಸಹಿಸದ ಪ್ರೇಮಾ ಪಿಂಟೋ ಅವರು ತಮ್ಮ ಮೇಲೆ ದಾಳಿ ನಡೆಸಿದ ಶಾಂತಿ ಪಿಂಟೋ, ಅವರ ಅಣ್ಣ ಜಾನಿ ಫರ್ನಾಂಡಿಸ್ ಹಾಗೂ ಸಿಸಿ ಕ್ಯಾಮರಾ ನೋಡಿ ಬೈದ ವಾಲೆಂತ್ ಪಿಂಟೋ ಅವರ ವಿರುದ್ಧ ದೂರು ನೀಡಿದ್ದಾರೆ. ಶಾಂತಿ ಪಿಂಟೋ ಅವರು ಸಹ ಬೇಲಿ ಮುರಿಯಲು ಆಗಮಿಸಿದ ಪ್ರೇಮಾ ಪಿಂಟೋ ಹಾಗೂ ಕಿರಣ ಪಿಂಟೋ ವಿರುದ್ಧ ದೂರಿದ್ದಾರೆ. ಎರಡು ಕಡೆಯವರ ದೂರು ಆಲಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.