ಸಿದ್ದಾಪುರದ ಲಲಿತಾ ಹೆಗಡೆ ಅವರು ಡಬ್ಬಿಯಲ್ಲಿ ಅಡಗಿಸಿಟ್ಟಿದ್ದ ಚಿನ್ನದ ತಾಳಿ ಕಳ್ಳರ ಪಾಲಾಗಿದೆ. ಲಲಿತಾ ಹೆಗಡೆ ಅವರು ಶಿರಸಿಯ ಸಂಬoಧಿಕರ ಮನೆಗೆ ಹೋಗಿರುವುದನ್ನು ಅರಿತ ಕಳ್ಳರು ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ಸಿದ್ದಾಪುರದ ಆಡುಕಟ್ಟಾದ ಲಲಿತಾ ಹೆಗಡೆ (65) ಅವರು ವಾಸವಾಗಿದ್ದಾರೆ. ಲಲಿತಾ ಹೆಗಡೆ ಅವರ ಪತಿ ಜಯಪ್ರಕಾಶ ಹೆಗಡೆ ಅವರು ನಿಧನರಾಗಿದ್ದಾರೆ. ಐದು ವರ್ಷದ ಹಿಂದೆ ಜಯಪ್ರಕಾಶ ಹೆಗಡೆ ಅವರು ಲಲಿತಾ ಹೆಗಡೆ ಅವರಿಗೆ ಚಿನ್ನದ ತಾಳಿ ಮಾಡಿಸಿಕೊಟ್ಟಿದ್ದರು. ಪತಿ ಮರಣದ ನಂತರ ಲಲಿತಾ ಹೆಗಡೆ ಅವರು ಆ ತಾಳಿಯನ್ನು ಭದ್ರವಾಗಿ ಕಪಾಟಿನಲ್ಲಿರಿಸಿದ್ದರು. 2.40 ಲಕ್ಷ ರೂ ಮೌಲ್ಯದ ಆ ತಾಳಿಯನ್ನು ಇದೀಗ ಕಳ್ಳರು ಅಪಹರಿಸಿದ್ದಾರೆ.
ಲಲಿತಾ ಹೆಗಡೆ ಅವರು ತಮ್ಮ ಮನೆಯ ದೇವರಕೋಣೆ ಪಕ್ಕದ ಮತ್ತೊಂದು ಕೋಣೆಯಲ್ಲಿ ಕಪಾಟು ಇರಿಸಿದ್ದರು. ಆ ಕಪಾಟಿನ ಒಳಗೆ ಪ್ಲಾಸ್ಟಿಕ್ ಡಬ್ಬಿಯಲ್ಲಿ ಪತಿ ಕೊಡಿಸಿದ ತಾಳಿಯನ್ನಿರಿಸಿದ್ದರು. ಮಾರ್ಚ 27ರಂದು ಲಲಿತಾ ಹೆಗಡೆ ಅವರು ಶಿರಸಿಯ ಸಂಬoಧಿಕರ ಮನೆಗೆ ಹೋಗಿದ್ದರು. ಮರುದಿನ ಮನೆಗೆ ಮರಳಿದಾಗ ಮನೆಯ ಬಾಗಿಲು ಒಡೆದಿರುವುದನ್ನು ನೋಡಿದರು. ಒಳಗೆ ಹೋಗಿ ಗಮನಿಸಿದಾಗ ಕಳ್ಳರು ತಾಳಿ ಕದ್ದಿರುವುದು ಗೊತ್ತಾಯಿತು.
ಕಳ್ಳರ ಕಾಟಕ್ಕೆ ಬೇಸತ್ತ ಲಲಿತಾ ಹೆಗಡೆ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಹೋದರು. ತಮ್ಮ ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ವರದಿ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ಶುರು ಮಾಡಿದರು.