`ಯಕ್ಷ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರು ಮಾಡಿದ ಭಾಷಣದಲ್ಲಿನ ವಿಷಯ ಎಲ್ಲವೂ ಸತ್ಯವಲ್ಲ. ಬಾಲ್ಯದಿಂದಲೂ ಯಕ್ಷಗಾನದಲ್ಲಿ ತೊಡಗಿರುವ ನನಗೆ ಎಲ್ಲಿಯೂ ಪುರುಷ ಕಲಾವಿದರಿಂದ ಸಮಸ್ಯೆ ಆಗಿಲ್ಲ’ ಎಂದು ಮತ್ತೊಬ್ಬ ಮಹಿಳಾ ಯಕ್ಷ ಕಲಾವಿದೆ ನಾಗಶ್ರೀ ಜಿ ಎಸ್ ಗೀಜಗಾರು ಅವರು ಹೇಳಿದ್ದಾರೆ. `ಎಲ್ಲಾ ಕ್ಷೇತ್ರದಲ್ಲೂ ಹೆಣ್ಣಿನ ಕುರಿತಾದ ದ್ವಂಧ್ವ ಭಾವಗಳು ಇದ್ದೇ ಇರುತ್ತದೆ. ಆದರೆ, ಅಶ್ವಿನಿ ಅವರು ಪುರುಷರ ಬಗ್ಗೆ ಆರೋಪಿಸುವ ಬದಲು ತಮಗಾದ ಕೆಟ್ಟ ಅನುಭವದ ವಿವರಣೆ ಕೊಡಬೇಕು’ ಎಂದವರು ಹೇಳಿದ್ದಾರೆ.
ಅಶ್ವಿನಿ ಕೊಂಡದಕುಳಿ ಅವರ ತಂದೆ ರಾಮಚಂದ್ರ ಹೆಗಡೆ ಅವರ `ಯಕ್ಷಚಂದ್ರ’ ಕೃತಿ ಬಿಡುಗಡೆ ಕಾರ್ಯಕ್ರಮದ ವೇಳೆ ಅಶ್ವಿನಿ ಕೊಂಡದಕುಳಿ ಅವರು ಮಾಡಿದ ಭಾಷಣ ವಿವಾದಕ್ಕೆ ಕಾರಣವಾಗಿದೆ. ಯಕ್ಷಚಂದ್ರ ಕೃತಿಯಲ್ಲಿ ಸಹ ವಿವಿಧ ಕಲಾವಿದರ ಬಗ್ಗೆ ಹಗುರವಾಗಿ ಬಿಂಬಿಸಿದ ಆರೋಪಗಳಿದ್ದು, ಅಶ್ವನಿ ಅವರು ಭಾಷಣದಲ್ಲಿ ಪುರುಷ ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ತಮ್ಮ ತಂದೆಯನ್ನು ಸಮರ್ಥಿಸುವ ಬರದಲ್ಲಿ ಉಳಿದ ಕಲಾವಿದರ ನಡತೆಯ ಬಗ್ಗೆ ಅವರು ಬೇಸರದಲ್ಲಿ ಮಾತನಾಡಿದ್ದಾರೆ.
`ಚೌಕಿಮನೆಯಲ್ಲಿ ಸ್ತ್ರೀ ಕಲಾವಿದರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ’ ಎಂಬುದು ಅಶ್ವಿನಿ ಕೊಂಡದಕುಳಿ ಅವರ ಅನುಭವ ಹಂಚಿಕೊ0ಡಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ `ಯಕ್ಷಗಾನದ ಚೌಕಿಮನೆಯಲ್ಲಿ ಮಹಿಳಾ ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಲಾಗುತ್ತದೆ ಎಂಬ ವಿಷಯ ಸತ್ಯವಲ್ಲ. ತಮಗೆ ಎಲ್ಲಿಯೂ ಈ ರೀತಿಯ ಅನುಭವ ಆಗಿಲ್ಲ’ ಎಂದು ನಾಗಶ್ರೀ ಜಿ ಎಸ್ ಗೀಜಗಾರು ಅವರು ಹೇಳಿದ್ದಾರೆ. `ಯಕ್ಷಗಾನ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಅಪ್ಪ ಅಮ್ಮನ ಪ್ರೋತ್ಸಾಹದಿಂದ ಬಾಲ್ಯದಿಂದಲೂ ವೇಷ ಮಾಡುವ ಉತ್ಸಾಹ. ಸ್ವಲ್ಪ ಹೆಜ್ಜೆ ಕಲಿತು ಅನೇಕ ಮೇಳಗಳಲ್ಲಿ ಭಾಗವಹಿಸಿದ್ದೇನೆ. ತಂಡಗಳಲ್ಲಿ ಹಲವಾರು ದಿಗ್ಗಜ ಯಕ್ಷಗಾನ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದೇನೆ. ಆದರೆ, ಅಶ್ವಿನಿ ಅವರು ಹೇಳಿದ ಹಾಗೇ ಎಲ್ಲಿಯೂ ಕೆಟ್ಟ ಅನುಭವ ಆಗಿಲ್ಲ’ ಎಂದು ನಾಗಶ್ರೀ ಜಿ ಎಸ್ ಗೀಜಗಾರು ಅವರು ಹೇಳಿದ್ದಾರೆ. ಸಹ ಕಲಾವಿದರು ನನ್ನೊಂದಿಗೆ ಚೌಕಿಯಲ್ಲಾಗಲೀ, ರಂಗದಲ್ಲಾಗಲೀ ತಮ್ಮೊಂದಿಗೆ ಗೌರವಯುತವಾಗಿ ನಡೆದುಕೊಂಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.
`ಹೆಣ್ಣು ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಾಗ ತಿರುಗಿನೋಡುವವರ ಸಂಖ್ಯೆ ಜಾಸ್ತಿ. ಕೆಲವರಲ್ಲಿ ಅಬ್ಬಾ! ಎನ್ನುವ ಗೌರವ ಭಾವ.. ಕೆಲವರಲ್ಲಿ ಆ ಹೆಣ್ಣು ನಮಗೆ ಸರಿಸಮಾನರಾ? ಎಂಬ ಕ್ಷುಲ್ಲಕ ಭಾವ ಇದ್ದೇ ಇರುತ್ತದೆ. ಎಲ್ಲಾ ಕ್ಷೇತ್ರದಲ್ಲೂ ಹೆಣ್ಣಿನ ಕುರಿತಾದ ದ್ವಂಧ್ವ ಇರಲಿದ್ದು, ಇದಕ್ಕೆ ಯಕ್ಷಗಾನ ಸಹ ಹೊರತಾಗಿಲ್ಲ. ಆದರೆ, ಯಕ್ಷಗಾನದ ಚೌಕಿ ಹಾಗೂ ರಂಗದಲ್ಲಿ ಅಂಥ ಋಣಾತ್ಮಕ ಅನುಭವ ಈವರೆಗೂ ನನಗೆ ಆಗಿಲ್ಲ. ಅಶ್ವಿನಿ ಕೊಂಡಾಕುಳಿ ಹೇಳಿಕೆಗೆ ಅವರೇ ವಿವರಣೆ ಕೊಡಬೇಕು’ ಎಂದವರು ಹೇಳಿದ್ದಾರೆ.
`ರಂಗದಲ್ಲಿ ನನ್ನ ಪಾತ್ರ ಮುಖ್ಯವಾಹಿನಿಗೆ ಬರಲು ಚಿಟ್ಟಾಣಿ ಅಜ್ಜ, ಧಾರೇಶ್ವರರು, ಜಲವಳ್ಳಿಯವರು, ಹೆರಂಜಾಲು ಗೋಪಾಲಣ್ಣ, ತೀರ್ಥಳ್ಳಿ ಗೋಪಾಲಣ್ಣ, ಜಲವಳ್ಳಿ ವಿದ್ಯಣ್ಣ, ಎಂ ಕೆಯವರು, ಯಲಗುಪ್ಪ ಸುಬ್ಬಣ್ಣ, ನೀಲ್ಕೋಡು ಶಂಕರಣ್ಣ, ಚಿಟ್ಟಾಣಿ ಮಾವ, ನಾಗೇಂದ್ರಣ್ಣ, ಕಾಸರಕೋಡು, ಉದಯಣ್ಣ, ಕಿರಾಡಿ ಎಲ್ಲರೂ ಕಾರಣರಾಗಿದ್ದಾರೆ. ನಾನು ರಂಗದಲ್ಲಿ ಕಂಡ ಪ್ರತಿಯೊಬ್ಬ ಕಲಾವಿದರೂ ತಮ್ಮ ಮನೆಯ ಹೆಣ್ಣುಮಕ್ಕಳಂತೆಯೇ ನೋಡುವ ವಿಶಾಲ ಹೃದಯಗಳಿಗೆ ಸದಾ ನಮಿಸುವೆ’ ಎಂದು ನಾಗಶ್ರೀ ಜಿ ಎಸ್ ಗೀಜಗಾರು ಹೇಳಿದ್ದಾರೆ. `ಯಕ್ಷಗಾನದಿಂದ ದೊರೆತ ಅನೇಕಾನೇಕ ಸೋದರರಿಗೆ ನಾನು ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ’ ಎಂದವರು ತಿಳಿಸಿದ್ದಾರೆ.