ಭಟ್ಕಳದ ಅಲಿ ಪಬ್ಲಿಕ್ ಸ್ಕೂಲ್’ನ ಬಸ್ಸು ಗುದ್ದಿದ ಪರಿಣಾಮ ಪಾದಚಾರಿಯೊಬ್ಬರು ಸಾವನಪ್ಪಿದ್ದಾರೆ. ಶಾಲಾ ಬಸ್ ಚಾಲಕ ಅಬ್ದುಲ್ ಕಾದರ ಶೇಖ್ ಅವರ ಅತಿವೇಗ ಹಾಗೂ ದುಡುಕುತನದ ಚಾಲನೆಯಿಂದ 15 ದಿನ ನರಳಾಡಿದ ವೃದ್ಧರು ಮಂಗಳೂರು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ.
ಸೆಪ್ಟೆಂಬರ 18ರಂದು ಅಲಿ ಪಬ್ಲಿಕ್ ಸ್ಕೂಲ್ ಬಸ್ಸು ಭಟ್ಕಳದ ತೆಂಗಿನಗುoಡಿ ಕ್ರಾಸಿನಿಂದ ಎಸ್ ಭಟ್ಕಳ ಸರ್ಕಲ್ ಕಡೆ ಚಲಿಸುತ್ತಿತ್ತು. ಬೆಳಗ್ಗೆ 11.30ರ ವೇಳೆಗೆ ಅಂಥ ಗಡಿಬಿಡಿ ಇಲ್ಲದಿದ್ದರೂ ಅಬ್ದುಲ್ ಕಾದರ ಶೇಖ್ ಅವರು ಬಸ್ಸನ್ನು ವೇಗವಾಗಿ ಓಡಿಸುತ್ತಿದ್ದರು. ಕಾಮಾಕ್ಷಿ ಪೆಟ್ರೋಲ್ ಬಂಕಿನ ಬಳಿ ತಮಿಳುನಾಡಿನ ವೆಟ್ಟಪ್ಪ ಕೃಷ್ಣಗಿರಿ ಅವರು ರಸ್ತೆ ದಾಡುತ್ತಿದ್ದರು. ಅವರನ್ನು ನೋಡಿಯೂ ಅಬ್ದುಲ್ ಕಾದರ ಶೇಖ್ (68) ಅವರು ಬಸ್ಸಿನ ವೇಗ ತಗ್ಗಿಸಲಿಲ್ಲ. ಹೀಗಾಗಿ ಆ ಬಸ್ಸು ವೆಟ್ಟಪ್ಪ ಅವರಿಗೆ ಡಿಕ್ಕಿಯಾಯಿತು.
ಈ ಅಪಘಾತದ ರಭಸಕ್ಕೆ ವೆಟ್ಟಪ್ಪ ಕೃಷ್ಣಗಿರಿ ಅವರು ಅಲ್ಲಿಯೇ ಬಿದ್ದರು. ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿತ್ತು. ಮೈ-ಕೈಗಳಿಗೆ ಸಹ ನೋವಾಗಿತ್ತು. ಪ್ರಜ್ಞೆಯೂ ತಪ್ಪಿತ್ತು. ವೆಟ್ಟಪ್ಪ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತು. ಅಲ್ಲಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅವರಿಗೆ ಸಾಕಷ್ಟು ಆರೈಕೆ ಮಾಡಲಾಯಿತು. ಆದರೆ, ಇದರಿಂದ ಪ್ರಯೋಜನ ಆಗಲಿಲ್ಲ.
15 ದಿನಗಳ ಕಾಲ ನರಳಾಡಿದ ವೆಟ್ಟಪ್ಪ ಅವರು ಅಕ್ಟೊಬರ್ 4ರಂದು ತಮ್ಮ ಪ್ರಾಣ ಬಿಟ್ಟರು. ಅಪಘಾತದಲ್ಲಿ ಗಾಯಗೊಂಡಿದ್ದ ವೆಟ್ಟಪ್ಪ ಅವರನ್ನು ಉಳಿಸಿಕೊಳ್ಳಲಾಗದ ಬಗ್ಗೆ ಆಸ್ಪತ್ರೆಯವರು ಭಟ್ಕಳ ಪೊಲೀಸರಿಗೆ ಇ-ಮೇಲ್ ಮಾಡಿದರು. ಗಣೇಶ ಹಾರ್ಡವೇರ್ ಹತ್ತಿರ ಪ್ಲೆಕ್ಸ ಪ್ರಿಂಟರ್ ಕೆಲಸ ಮಾಡುವ ಮಹ್ಮದ್ ರಿಜ್ವಾನ್ ಅವರು ಅಲಿ ಪಬ್ಲಿಕ್ ಸ್ಕೂಲ್’ನ ಬಸ್ ಚಾಲಕ ಅಬ್ದುಲ್ ಕಾದರ ಶೇಖ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
`ನಿಧಾನವಾಗಿ ವಾಹನ ಓಡಿಸಿ.. ಸುರಕ್ಷತಾ ಕ್ರಮ ಅನುಸರಿಸಿ’