ಮುಂಡಗೋಡ ಬಸ್ ನಿಲ್ದಾಣ ಎದುರು ಅನ್ನದಾತ ಅಗ್ರೋ ಕೆಮಿಕಲ್ಸ್ ಅಂಗಡಿ ಮಾಲಕ ಮೀರಸಾಬ ಜಮಾದಾರ್ ಅವರ ಹಪಾಹಪಿತನಕ್ಕೆ ಹಮಾಲಿ ಕೆಲಸ ಮಾಡುವ ದಿವಾನಸಾಬ್ ಗನ್ನುಮಿಯಾ ಅವರು ಸಾವನಪ್ಪಿದ್ದಾರೆ.
ಧಾರವಾಡ ಮೂಲದ ಮೀರಸಾಬ ಜಮಾದಾರ್ ಅವರು ಸದ್ಯ ಮುಂಡಗೋಡು ಕೆಎಚ್‌ಬಿ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಅವರು ತಡರಾತ್ರಿಯವರೆಗೂ ಹಮಾಲಿಗಳನ್ನು ದುಡಿಸುತ್ತಾರೆ. ಹಮಾಲಿ ಕೆಲಸ ಮಾಡುವವರು ತಮಗೆ ಸುಸ್ತಾದ ಬಗ್ಗೆ ತಿಳಿಸಿದರೂ ಅದಕ್ಕೆ ಅವಕಾಶ ಕೊಡದೇ ದುಡಿಸಿಕೊಳ್ಳುತ್ತಾರೆ. ಸೆಪ್ಟೆಂಬರ್ 29ರ ರಾತ್ರಿ ಮುಂಡಗೋಡಿನ ದೇಶಪಾಂಡೆ ನಗರದ ರುಸ್ತುಮಾಶಾ ಬಾಬಾಸಾಬ್ ಹಾಗೂ ಕೊಪ್ಪದ ಓಣಿಯ ದಿವಾನಸಾಬ್ ಗನ್ನುಮಿಯಾ ಅವರನ್ನು ರಾತ್ರಿ 11.45ರವರೆಗೂ ಮೀರಸಾಬ ಜಮಾದಾರ್ ಅವರು ದುಡಿಸಿದ್ದಾರೆ. ಅದರ ಪರಿಣಾಮ ಕೆಲಸ ಮಾಡುತ್ತಲೇ ಆಯಾಸಗೊಂಡಿದ್ದ ದಿವಾನಸಾಬ್ ಗನ್ನುಮಿಯಾ ಅವರು ಕುಸಿದು ಬಿದ್ದು ಸಾವನಪ್ಪಿದ್ದಾರೆ.
ಮೀರಸಾಬ ಜಮಾದಾರ್ ಅವರು ಗೊಬ್ಬರ ಅಂಗಡಿ ಮಾಲಕರಾಗಿದ್ದು, ಹಾವೇರಿಯ ಪ್ರಶಾಂತ ಅರಳೇಶ್ವರ ಅವರ ಟಾಕ್ಟರಿನ ಮೂಲಕ ಗೊಬ್ಬರ ತರಿಸಿದ್ದರು. ಅದನ್ನು ಕಾಲಿ ಮಾಡಲು ದಿವಾನಸಾಬ್ ಗನ್ನುಮಿಯಾ ಹಾಗೂ ರುಸ್ತುಮಾಶಾ ಬಾಬಾಸಾಬ್ ಅವರಿಗೆ ವಹಿಸಿದ್ದರು. ರಾತ್ರಿ 11.45 ಆಗಿದ್ದರಿಂದ `ನಾಳೆ ಎಲ್ಲಾ ಗೊಬ್ಬರ ಖಾಲಿ ಮಾಡುತ್ತೇವೆ’ ಎಂದರೂ ಮೀರಸಾಬ ಜಮಾದಾರ್ ಒಪ್ಪಿರಲಿಲ್ಲ. ಟಾಕ್ಟರ್ ಚಾಲಕ ಪ್ರಶಾಂತ ಅರಳೇಶ್ವರ ಸಹ `ನಾಳೆ ಟಾಕ್ಟರಿಗೆ ಬೇರೆ ಕೆಲಸವಿದೆ. ಈಗಲೇ ಖಾಲಿ ಮಾಡಿ’ ಎಂದು ಒತ್ತಾಯಿಸಿದ್ದರು. ದಿನವಿಡೀ ದುಡಿದು ದಣಿದಿದ್ದರೂ ಆ ಇಬ್ಬರು ರಾತ್ರಿಯೂ ಹಮಾಲಿ ಕೆಲಸ ಮಾಡುತ್ತಿದ್ದರು.
ಆದರೆ, ಗೊಬ್ಬರ ಖಾಲಿ ಮಾಡಲು ಬೇಕಿರುವ ಕನಿಷ್ಟ ಉಪಕರಣಗಳನ್ನು ಸಹ ಮೀರಸಾಬ ಜಮಾದಾರ್ ಅವರು ಕೊಟ್ಟಿರಲಿಲ್ಲ. `ಟಾಕ್ಟರಿನಿಂದ ಗೊಬ್ಬರ ಹೊತ್ತು ಇಳಿಯುವುದಕ್ಕಾಗಿ ಹಲಿಗೆ ಬೇಕು’ ಎಂದರೂ ಅದನ್ನು ಪೂರೈಸಿರಲಿಲ್ಲ. ಜೊತೆಗೆ ಕೆಲ ಕಾಲ ವಿಶ್ರಾಂತಿಪಡೆಯಲು ಅವಕಾಶ ನೀಡಿರಲಿಲ್ಲ. ಅದಾಗಿಯೂ ಅವರಿಬ್ಬರು ಕಷ್ಟಪಟ್ಟು ಗೊಬ್ಬರ ಖಾಲಿ ಮಾಡುತ್ತಿದ್ದರು. ಈ ವೇಳೆ ಗೊಬ್ಬರ ಹೊತ್ತ ದಿವಾನಸಾಬ್ ಗನ್ನುಮಿಯಾ ಅವರು ಕಾಲು ಜಾರಿ ಮೆಟ್ಟಿಲ ಮೇಲೆ ಬಿದ್ದರು. ಅಲ್ಲಿಯೇ ಅವರು ಕೊನೆಯುಸಿರೆಳೆದರು.
ಗೊಬ್ಬರ ಅಂಗಡಿ ಮಾಲಕ ಮೀರಸಾಬ ಜಮಾದಾರ್ ಹಾಗೂ ಟಾಕ್ಟರ್ ಚಾಲಕ ಪ್ರಶಾಂತ ಅರಳೇಶ್ವರ ಅವರ ಒತ್ತಡ ಈ ಅವಘಡಕ್ಕೆ ಕಾರಣ ಎಂದು ರುಸ್ತುಮಾಶಾ ಬಾಬಾಸಾಬ್ ಅವರು ಪೊಲೀಸರ ಮುಂದೆ ಬಾಯ್ಬಿಟ್ಟರು. ಪೊಲೀಸರು ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದರು.