`ಉತ್ತರ ಕನ್ನಡ ಜಿಲ್ಲೆಯಲ್ಲಿರುವ 14-15 ವರ್ಷದ ಎಲ್ಲಾ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ನ್ನು ತಡೆಗಟ್ಟುವ ಲಸಿಕೆ ಹಾಕಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. `ಮಹಿಳೆಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಉಚಿತವಾಗಿ ಎಚ್ ಪಿ ವಿ ಲಸಿಕೆ ಹಾಕಬೇಕು’ ಎಂದವರು ಹೇಳಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು `ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರಲ್ಲಿ ಕಂಡು ಬರುವ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಎಂದು ಪರಿಗಣಿಸಲಾಗಿದೆ. ಗರ್ಭಕಂಠದ ಕ್ಯಾನ್ಸರಿಗೆ ಒಳಗಾಗುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಅಭಿಯಾನ ನಡೆಸಬೇಕು. ಜಿಲ್ಲೆಯಲ್ಲಿರುವ 14 ಹಾಗೂ 15 ವರ್ಷದೊಳಗಿನ ಎಲ್ಲಾ ಹೆಣ್ಣು ಮಕ್ಕಳಿಗೂ ಎಚ್ ಪಿ ವಿ ಲಸಿಕೆ ನೀಡಬೇಕು’ ಎಂದು ಸೂಚಿಸಿದ್ದಾರೆ.
`ಶಿಕ್ಷಣ ಇಲಾಖೆಯ ಮೂಲಕ ಹೆಣ್ಣು ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳಿಗೆ ಹೆಚ್ ಪಿ ವಿ ಲಸಿಕೆ ನೀಡುವ ಕುರಿತು ಮಾಹಿತಿ ನೀಡಬೇಕು. ಎಲ್ಲಾ ಗ್ರಾಮಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ವಾಹನಗಳ ಮೂಲಕ ಲಸಿಕೆಯ ಮಹತ್ವದ ಕುರಿತು ವ್ಯಾಪಕ ಅರಿವು ಮೂಡಿಸಬೇಕು’ ಎಂದರು. `ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಪೋಷಕರು ತಮ್ಮ ಅರ್ಹ ಹೆಣ್ಣು ಮಕ್ಕಳಿಗೆ ಈ ಲಸಿಕೆಯನ್ನು ಕೊಡಿಸುವ ಮೂಲಕ ತಮ್ಮ ಮಕ್ಕಳು ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ಗೆ ಒಳಗಾಗುವುದನ್ನು ತಪ್ಪಿಸಬೇಕು’ ಎಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ ನಟರಾಜ್, ಡಾ ರಮೇಶ್ ರಾವ್, ಡಾ ಹರ್ಷಾ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಹಾಜರಿದ್ದರು.