ಶಿರಸಿಯ ಶ್ರೀನಿಕೇತನ ಶಾಲೆಯಲ್ಲಿ 3ನೇ ತರಗತಿ ಓದುವ ಓಂ ಎನ್ ಅವರು ಶೀರ್ಷಾಸನದಲ್ಲಿ ಶಿವವತಾಂಡವ ಸ್ತೋತ್ರ ಪಠಿಸಿದ್ದು, ಈ ಸಾಧನೆ ಅವರಿಗೆ ವಿಶ್ವ ದಾಖಲೆಯ ಪುಟ ಸೇರಿದೆ.
ಶಿರಸಿಯ ಇಸಳೂರಿನಲ್ಲಿರುವ ಶ್ರೀನಿಕೇತನ ಶಾಲೆಯಲ್ಲಿ ಓಂ ಎನ್ ಅವರು 3ನೇ ತರಗತಿ ಓದುತ್ತಿದ್ದಾರೆ. ಬಾಲ್ಯದಿಂದಲೂ ಪ್ರತಿಭಾನ್ವಿತರಾಗಿರುವ ಅವರನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಶಿವರಾತ್ರಿಯ ದಿನ ಓಂ ಎನ್ ಅವರು ವಿಶ್ವದಾಖಲೆಯ ಸಾಹಸವೊಂದನ್ನು ಮಾಡಿದ್ದಾರೆ. 8 ವರ್ಷದ ಅವರು ಶೀರ್ಷಾಸನ ಭಂಗಿಯಲ್ಲಿ ನಿಂತು ಶಿವತಾಂಡವ ಸ್ತೋತ್ರವನ್ನು ಪಠಿಸಿದ್ದಾರೆ.
3ನಿಮಿಷ 42 ಸೆಕೆಂಡುಗಳ ಅವಧಿಯಲ್ಲಿ ಅವರು ಶಿವತಾಂಡವ ಸ್ತೋತ್ರಪಡಿಸಿದ್ದು, ಈ ಸಾಧನೆಯನ್ನು ಇಂಟರ್‌ನ್ಯಾಷಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಗುರುತಿಸಿದೆ. ಜೊತೆಗೆ ಇದನ್ನು ವಿಶ್ವ ದಾಖಲೆ ಎಂದು ಪರಿಗಣಿಸಿ ವರ್ಡ್ ರೆಕಾರ್ಡ್ ಪುಸ್ತಕದಲ್ಲಿ ಈ ದಾಖಲೆಯನ್ನು ಉಲ್ಲೇಖಿಸಿದೆ. ಓಂ ಎನ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಓಂ ಎನ್ ಅವರು 6ನೇ ವಯಸ್ಸಿನಲ್ಲಿಯೇ 1 ನಿಮಿಷ 42 ಸೆಕೆಂಡಿನಲ್ಲಿ ಏಷ್ಯಾ ಖಂಡದ ಎಲ್ಲ 48 ದೇಶಗಳ ಹೆಸರು, ಅವುಗಳ ರಾಜಧಾನಿ ಹಾಗೂ ಕರೆನ್ಸಿಗಳ ಬಗ್ಗೆ ಹೇಳಿ ವಿಶ್ವ ದಾಖಲೆ ನಿರ್ಮಿಸಿದ್ದರು. ಆ ದಾಖಲೆಗಳ ಸಾಲಿಗೆ ಇದೀಗ ಇನ್ನೊಂದು ಸೇರ್ಪಡೆಯಾಗಿದೆ.
ಓಂ ಎನ್ ಶಿರಸಿಯ ನಿವೃತ್ತ ಸೈನ್ಯಾಧಿಕಾರಿ ಶ್ರೀನಿವಾಸ ನಾಯ್ಕ ಹಾಗೂ ಉಪನ್ಯಾಸಕಿ ಅಪರ್ಣಾ ಕರ್ಕಿ ಅವರ ಮಗ. ಓಂ ಎನ್ ಅವರ ಸಾಧನೆಗೆ ಶಿರಸಿಯ ಮದನ್ ಫೋಟೋಸ್ ಅವರು ತಾಂತ್ರಿಕ ಸಹಕಾರ ಹಾಗೂ ವಿಡಿಯೋ ಸಹಾಯ ಮಾಡಿದ್ದಾರೆ.