ಖಾಸಗಿ ವಾಹನ ಸವಾರರ ದಾಖಲೆ ಪರಿಶೀಲಿಸುವ ಪೊಲೀಸರು ಸರ್ಕಾರಿ ವಾಹನದ ದಾಖಲೆಗಳ ಬಗ್ಗೆ ಪ್ರಶ್ನಿಸುತ್ತಿಲ್ಲ. ಹೀಗಾಗಿ ಸರ್ಕಾರಿ ವಾಹನಗಳ ದಾಖಲೆ ಸರಿ ಇಲ್ಲದಿದ್ದರೂ ಅದನ್ನು ಕೇಳುವವರಿಲ್ಲ!
ಮೊನ್ನೆ ಕುಮಟಾದಲ್ಲಿ ಸಹಾಯಕ ಆಯುಕ್ತ ಶ್ರವಣಕುಮಾರ ಅವರು ಬಳಸುತ್ತಿದ್ದ ಕಾರು ಅಪಘಾತವಾಗಿದೆ. ಅಪಘಾತದ ವೇಳೆ ಆ ಕಾರಿನಲ್ಲಿ ಹಿರಿಯ ಅಧಿಕಾರಿಗಳಿರಲಿಲ್ಲ. ಕಾರಿನಲ್ಲಿದ್ದ ಸರ್ಕಾರಿ ಸಿಬ್ಬಂದಿ ಹಾಗೂ ಚಾಲಕರಿಗೆ ಅಪಘಾತದಿಂದ ದೊಟ್ಟ ಪೆಟ್ಟಾಗಲಿಲ್ಲ. ಆದರೆ, ಅಪಘಾತದ ಅವಧಿಯಲ್ಲಿ ಆ ಕಾರಿಗೆ ಇನ್ಸುರೆನ್ಸ ಸಹ ಇರಲಿಲ್ಲ!
ಅಕ್ಟೊಬರ್ 4ರಂದು ಸಹಾಯಕ ಆಯುಕ್ತ ಶ್ರವಣಕುಮಾರ ಅವರ ಕಾರಿನ ಚಾಲಕ ರಜೆಯಲ್ಲಿದ್ದರು. ಹೀಗಾಗಿ ತಹಶೀಲ್ದಾರ್ ಕಚೇರಿಯ ಚಾಲಕರನ್ನು ಸಹಾಯಕ ಆಯುಕ್ತರು ತಮ್ಮ ಕಾರಿಗೆ ನೇಮಿಸಿದ್ದರು. ಆ ದಿನ ವೇಗವಾಗಿ ಬಂದ ಶ್ರೀಕುಮಾರ ಬಸ್ಸು ಸಹಾಯಕ ಆಯುಕ್ತರು ಬಳಸುವ ಕಾರಿಗೆ ಗುದ್ದಿತು. ಪರಿಣಾಮ ಕಾರಿನ ಜೊತೆ ಬಸ್ಸು ಜಖಂ ಆಯಿತು. ಕಾರಿನಲ್ಲಿದ್ದ ಸರ್ಕಾರಿ ಸಿಬ್ಬಂದಿಯೊಬ್ಬರ ಬೆನ್ನಿಗೆ ಸಣ್ಣ ಪ್ರಮಾಣದಲ್ಲಿ ನೋವಾಗಿದ್ದು ಬಿಟ್ಟರೆ ಬೇರೆ ಸಮಸ್ಯೆ ಆಗಲಿಲ್ಲ. ದುರಂತ ನಡೆದಿದ್ದರೂ ಕಾನೂನಾತ್ಮಕವಾಗಿ ಪರಿಹಾರಪಡೆಯಲು ಸರ್ಕಾರಿ ಕಾರಿಗೆ ವಿಮೆಯೂ ಇರಲಿಲ್ಲ!
ಕುಮಟಾ ಸಹಾಯಕ ಆಯುಕ್ತರಿಗೆ ನೀಡಲಾದ ಆ ಕಾರು ಮೂಲತಃ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯದ್ದಾಗಿದೆ. ಹೀಗಾಗಿ ಈ ಕಾರಿನ ಎಲ್ಲಾ ಕಡತಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿಯೇ ಇವೆ. ಹೀಗಾಗಿ ವಿಮಾ ಅವಧಿ ಮುಗಿದ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೇ ಕರ್ನಾಟಕ ಸರ್ಕಾರದ ವಿಮಾ ಇಲಾಖೆಗೆ ಪತ್ರ ರವಾನೆಯಾಗಬೇಕಿತ್ತು. ಮಾತೃ ಇಲಾಖೆಯಿಂದಲೇ ಕಾರಿನ ವಿಮಾ ಕಂತು ಪಾವತಿ ಆಗಬೇಕಿದ್ದು, ಕಾರನ್ನು ಉಪವಿಭಾಗಾಧಿಕಾರಿಗಳಿಗೆ ನೀಡಿದ ಆ ಇಲಾಖೆ ಅಧಿಕಾರಿಗಳು ವಿಮೆ ಬಗ್ಗೆ ಯೋಚಿಸಿಲ್ಲ. ಹೀಗಾಗಿ ಸಕಾಲದಲ್ಲಿ ಸರ್ಕಾರ ವಿಮಾ ಕಂತು ಪಾವತಿಸಿದ ಕಾರಣ ಅಪಘಾತದ ಅವಧಿಯಲ್ಲಿ ವಿಮೆ ಚಾಲನೆಯಲ್ಲಿರಲಿಲ್ಲ.
ವಿಮಾ ಕಂತು ಪಾವತಿ ಸಮಸ್ಯೆ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಕ್ಕ ಮಾದರ್ ಅವರಿಗೆ ಫೋನ್ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ತಮ್ಮ ಇಲಾಖೆಯ ವಾಹನದ ಕಾರಿನ ವಿಮಾ ಅವಧಿ ಮುಗಿದಿರುವ ವಿಷಯ ಅವರಿಗೂ ಅರಿವಿರುವ ಹಾಗಿಲ್ಲ. ಅಪಘಾತಕ್ಕೆ ಕಾರಣವಾದ ಶ್ರೀಕುಮಾರ ಬಸ್ಸಿನ ದಾಖಲೆಗಳು ಸರಿಯಾಗಿದ್ದ ಕಾರಣ ಬಸ್ಸಿನ ವಿಮೆ ಆಧಾರದಲ್ಲಿ ಸರ್ಕಾರಿ ಕಾರಿನ ದುರಸ್ಥಿ ನಡೆಯಲಿದ್ದು, ಪೊಲೀಸ್ ವಶದಲ್ಲಿರುವ ವಾಹನ ಈ ದಿನ ಬಿಡುಗಡೆಯಾಗುವ ಸಾಧ್ಯತೆಯಿದೆ.