ಮೂರು ತಿಂಗಳ ಹಿಂದೆ ಭಾರೀ ಪ್ರಮಾಣದ ಯಂತ್ರೋಪಕರಣಗಳನ್ನು ಹೊತ್ತು ಗುಜರಾತ್‌ನಿಂದ ಹೊರಟ ಲಾರಿ ಕೈಗಾ ಅಣು ವಿದ್ಯುತ್ ಘಟಕಕ್ಕೆ 3ಕಿಮೀ ದೂರ ಬಾಕಿಯಿರುವಾಗ ಲಗಾಟಿ ಹೊಡೆದಿದೆ. ಅಲ್ಲಿಂದ ಇಲ್ಲಿಯವರೆಗೆ ಹೊತ್ತು ತಂದ ಯಂತ್ರೋಪಕರಣಗಳೆಲ್ಲವೂ ಲಾರಿಯ ಜೊತೆ ನೆಲಕ್ಕೆ ಉರುಳಿವೆ.
ಕಾರವಾರ ಸಮೀಪದ ಕೈಗಾದಲ್ಲಿ ಸದ್ಯ 5 ಹಾಗೂ 6ನೇ ಅಣು ವಿದ್ಯುತ್ ಘಟಕ ಸ್ಥಾಪನೆ ಕಾರ್ಯ ಜೋರಾಗಿದೆ. ಈ ಘಟಕ ಸ್ಥಾಪನೆಗಾಗಿ ಬೇರೆ ಬೇರೆ ಕಡೆಗಳಿಂದ ಯಂತ್ರೋಪಕರಣಗಳು ಬರುತ್ತಿವೆ. ಅದರಂತೆ ಗುಜರಾತಿನಿಂದ ಭಾರೀ ಪ್ರಮಾಣದ ಲಾರಿಯೊಂದು ಆಗಮಿಸಿದ್ದು, ಅದು ಕಾರವಾರದ ಹರ್ಟುಗಾ ಬಳಿ ಪಲ್ಟಿಯಾಗಿದೆ. ಕಳೆದ 20 ದಿನಗಳಿಂದ ಕಾರವಾರದಲ್ಲಿ ಆಮೆಗತಿಯಲ್ಲಿ ಸಾಗುತ್ತಿದ್ದ ಲಾರಿ ಕೊನೆ ಕ್ಷಣದಲ್ಲಿ ಕೈ ಕೊಟ್ಟಿದೆ.
ಮಲ್ಲಾಪುರ ಮಾರ್ಗವಾಗಿ ಹೊರಟಿದ್ದ ಲಾರಿ ಅತ್ಯಂತ ನಿಧಾನವಾಗಿ ಸಾಗುತ್ತಿತ್ತು. ಈ ಯಂತ್ರ ಸಾಗಾಣಿಕೆಗಾಗಿ ರಸ್ತೆಯ ಅಂಚಿನ ಗಿಡ-ಮರಗಳ ಕಟಾವು ಸಹ ನಡೆದಿತ್ತು. ಏಪ್ರಿಲ್ 15ರಂದು ಕಾರವಾರ ಪ್ರವೇಶಿಸಿದ್ದ ಈ ಲಾರಿ ಪ್ರತಿ ಹೆಜ್ಜೆಯಿಡುವಾಗಲೂ ಸಾಕಷ್ಟು ಯೋಚಿಸಿ ಮುಂದೆ ತೆವಳುತ್ತಿತ್ತು. ಹೀಗಿದ್ದರೂ ಭೂಮಿಯ ಮೇಲಿನ ಸಮತೋಲನ ತಪ್ಪಿದ ಕಾರಣ ಹರ್ಟುಗಾದಲ್ಲಿ ಲಾರಿ ಉಲ್ಟಾ ಆಯಿತು.
ಲಾರಿ ಬಿದ್ದ ಪರಿಣಾಮ ಆ ರಸ್ತೆಯೂ ಹಾಳಾಯಿತು. ರಸ್ತೆ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಸಮಸ್ಯೆ ಅನುಭವಿಸಿದರು. ಸದ್ಯ ಯಂತ್ರೋಪಕರಣಗಳನ್ನು ಮೇಲೆತ್ತುವ ಕಾರ್ಯ ನಡೆಯುತ್ತಿದೆ. ಅದು ಸಹ ಅತ್ಯಂತ ನಾಜೂಕಿನ ಕೆಲಸವಾಗಿದ್ದು, ನಿಧಾನವಾಗಿ ಚಟುವಟಿಕೆಯನ್ನು ಮುಂದುವರೆಸಲಾಗಿದೆ.