ತನ್ನ ವಿಶಿಷ್ಟ ರುಚಿಯಿಂದ ಪ್ರಸಿದ್ಧಿಪಡೆದಿರುವ ಅಂಕೋಲಾದ ಕರಿ ಇಶಾಡ ಮಾವಿನ ಹಣ್ಣಿಗೆ ಇದೀಗ ವಿದೇಶದಿಂದಲೂ ಬೇಡಿಕೆ ಬಂದಿದೆ. ಇಲ್ಲಿನ ಮಾದೇವ ಗೌಡ ಅವರು ಆ ಹಣ್ಣುಗಳನ್ನು ಪ್ರಪಂಚದ ಎಲ್ಲಡೆ ಪರಿಚಯಿಸುವ ತಯಾರಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೆಳಂಬಾರ ಮೂಲದ ಮಾದೇವ ಗೌಡ ಅವರು ಸದ್ಯ ಕೋಗ್ರೇಯಲ್ಲಿ ವಾಸವಾಗಿದ್ದಾರೆ. ತಮ್ಮ ಮೂಲ ಮನೆಯ ಜೊತೆ ವಾಸ ಸ್ಥಳದ ಬಳಿಯೂ ಅವರು ಕೆಲ ಮಾವಿನ ಗಿಡಗಳನ್ನು ನೆಟ್ಟಿದ್ದಾರೆ. ಅದರೊಂದಿಗೆ ಸುತ್ತಲಿನ ಅನೇಕ ರೈತರ ಬಳಿಯಿರುವ ಮಾವಿನ ಮರಗಳನ್ನು ಗುತ್ತಿಗೆ ಮೂಲಕಪಡೆದು ಅದರ ಫಸಲು ಕೊಯ್ಯುತ್ತಾರೆ. ಆ ಫಸಲನ್ನೇ ಇದೀಗ ಅವರು ದೇಶ-ವಿದೇಶಗಳಿಗೂ ರಪ್ತು ಮಾಡುತ್ತಿದ್ದಾರೆ.
ಅಂಕೋಲಾದಲ್ಲಿ ಎರಡು ಶತಮಾನಕ್ಕೂ ಹಳೆಯ ಮಾವಿನ ಮರಗಳಿವೆ. ಪ್ರತಿ ವರ್ಷ ಅತ್ಯಂತ ರುಚಿಕರ ಹಣ್ಣು ನೀಡುವ ಮರಗಳನ್ನು ಮಾದೇವ ಗೌಡ ಅವರು ಗುರುತಿಸಿದ್ದು, ಹೂವು ಬಿಟ್ಟ ಕೂಡಲೇ ಮರ ನೋಡಿ ಆ ಮರಗಳನ್ನು ಗುತ್ತಿಗೆ ಮಾಡಿಕೊಳ್ಳುತ್ತಾರೆ. ಮಾವು ಬೆಳೆಯುವವರೆಗೂ ನಿಷ್ಠೆಯಿಂದ ಕಾದು, ಬಲಿತ ಕಾಯಿಗಳನ್ನು ಕೊಯ್ದು ಹಣ್ಣು ಮಾಡುತ್ತಾರೆ. ಕಳೆದ ಅನೇಕ ವರ್ಷಗಳಿಂದ ಮುಂಚಿತವಾಗಿ ಬೇಡಿಕೆ ಸಲ್ಲಿಸಿದವರಿಗೆ ಆ ಮಾವುಗಳನ್ನು ಪೂರೈಸುವ ಕಾಯಕದಲ್ಲಿ ಮಾದೇವ ಗೌಡ ಅವರು ತೊಡಗಿಸಿಕೊಂಡಿದ್ದಾರೆ. ಸ್ವತಃ ಕರಿ ಇಶಾಡು ಮಾವು ಬೆಳೆಗಾರರಾಗಿರುವ ಮಾದೇವ ಗೌಡ ಅವರು ರೈತರಿಂದಲೂ ನೇರವಾಗಿಪಡೆದು ಅದನ್ನು ಅಗತ್ಯವಿದ್ದವರಿಗೆ ತಲುಪಿಸುತ್ತಾರೆ.
ಸದ್ಯ ಇಟಲಿಯಲ್ಲಿ ನಡೆಯುವ ಸಮ್ಮೇಳನವೊಂದಕ್ಕೆ ಮಾವಿನ ಹಣ್ಣು ಪೂರೈಸುವಂತೆ ಮಾದೇವ ಗೌಡ ಅವರಿಗೆ ಸೂಚನೆ ಬಂದಿದೆ. ಅದರ ಅನ್ವಯ ಅವರು 25 ಕೆಜಿ ಕರಿ ಇಶಾಡು ಮಾವನ್ನು ಬೆಂಗಳೂರಿಗೆ ಕಳುಹಿಸಿದ್ದು, ಗುರುವಾರ ಆ ಹಣ್ಣು ವಿಮಾನ ಏರಿ ಇಟಲಿ ಕಡೆ ಸಾಗಿದೆ. ಕರಿ ಇಶಾಡು ಹಣ್ಣಿಗೆ ಜಿಐ ಟ್ಯಾಗ್ ದೊರಕಿಸಿಕೊಡುವಲ್ಲಿಯೂ ಮಾದೇವ ಗೌಡ ಅವರು ಸಾಕಷ್ಟು ಶ್ರಮಿಸಿದ್ದು, ಅಂಕೋಲಾ ಹಣ್ಣನ್ನು ವಿಶ್ವ ಪ್ರಸಿದ್ಧಿ ಮಾಡಿದ್ದಾರೆ. ಬೆಂಗಳೂರಿನ ರಪ್ತು ಸಂಸ್ಥೆಯೊAದು ಮಾವಿನ ಹಣ್ಣನ್ನು ವಿದೇಶಕ್ಕೆ ಕಳುಹಿಸುವ ಜವಾಬ್ದಾರಿವಹಿಸಿಕೊಂಡಿದೆ. ಜಾಗತಿಕ ಮಾರುಕಟ್ಟೆಗೆ ಕರಿ ಇಶಾಡ್ ಹಣ್ಣು ಅಧಿಕೃತವಾಗಿ ರಪ್ತಾಗುತ್ತಿರುವುದು ಇದೇ ಮೊದಲು.