ಕುಮಟಾ ಪುರಸಭಾ ಮುಖ್ಯಾಧಿಕಾರಿಯಾಗಿದ್ದ ಸ್ವಾಮಿ ಮೈಸೂರು ಅವರನ್ನು ದಿಢೀರ್ ಆಗಿ ವರ್ಗಾವಣೆ ಮಾಡಲಾಗಿದ್ದು, ಅದೇ ವೇಗದಲ್ಲಿ ಅವರ ವರ್ಗಾವಣೆಗೆ ತಡೆ ಬಿದ್ದಿದೆ.
ಸ್ವಾಮಿ ಅವರು ಕುಮಟಾಗೆ ಬಂದು ಒಂದು ವರ್ಷ ಸಹ ಕಳೆದಿಲ್ಲ. ಅವರ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ. ಆಡಳಿತ ಹಿತದೃಷ್ಟಿ ಕಾರಣದಿಂದಲೂ ಅವರನ್ನು ವರ್ಗಾವಣೆ ಮಾಡಬೇಕೆನ್ನುವ ಶಿಫಾರಸ್ಸಿಲ್ಲ. ಅದಾಗಿಯೂ, ದಿಢೀರ್ ಆಗಿ ಅವರನ್ನು ಕುಮಟಾದಿಂದ ವರ್ಗ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಸ್ವಾಮಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ನ್ಯಾಯಾಲಯ ವರ್ಗಾವಣೆಗೆ ತಡೆ ಹಿಡಿದಿದೆ.
ಈ ಹಿಂದೆ ಕುಮಟಾದಲ್ಲಿ ಕೆಲಸ ಮಾಡಿದ್ದ ಮತ್ತೊಬ್ಬ ಅಧಿಕಾರಿ ಮತ್ತೆ ಅದೇ ಸ್ಥಳಕ್ಕೆ ಬರಲು ಆಸಕ್ತರಾಗಿದ್ದಾರೆ. ಹೀಗಾಗಿ ಸ್ವಾಮಿ ಅವರನ್ನು ಅಲ್ಲಿಂದ ವರ್ಗ ಮಾಡಿಸಬೇಕು ಎಂದು ಅವರು ರಾಜಕೀಯ ಪ್ರಭಾವ ಬೀರಿ ಕಸರತ್ತು ನಡೆಸಿದ್ದಾರೆ ಎಂಬ ಮಾತುಗಳಿವೆ. ಈ ಮಾತಿಗೆ ಪೂರಕವಾಗಿ ಬಸವನವಾಗೇವಾಡಿಯಿಂದ ಬಂದ ಕಲಾದಗಿ ಅವರು ಕುಮಟಾ ಪುರಸಭೆಯ ಅಧಿಕಾರವಹಿಸಿಕೊಂಡಿದ್ದು, ಸದ್ಯ ಸ್ವಾಮಿ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿAದ ಅಧಿಕಾರವಹಿಸಿಕೊಂಡವರ ಅಧಿಕಾರ ಮೊಟಕಾಗಿದೆ.
ಕುಮಟಾ ಪುರಸಭೆಯ ಮುಖ್ಯಾಧಿಕಾರಿ ಖುರ್ಚಿಗೆ ಏಕೆ ಅಷ್ಟು ಪೈಪೋಟಿ? ಎಂಬುದು ಯಾರಿಗೂ ಗೊತ್ತಾಗಿಲ್ಲ. `ಅಲ್ಲೇನಾದರೂ ನಿಧಿ ಇದೆಯೇ?’ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಸದ್ಯ ಖುರ್ಚಿ ಕದನ ಮುಂದುವರೆಯಲಿದ್ದು, ಸೋಮವಾರ ಆ ಖುರ್ಚಿಗೆ ಹಕ್ಕುದಾರ ಯಾರು? ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಸಿಗುವ ನಿರೀಕ್ಷೆಯಿದೆ.