ಅಂಕೋಲಾ ಹಳವಳ್ಳಿಯ ಗಣೇಶ ಸಿದ್ದಿ ಅವರು ಅದೇ ಭಾಗದ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಮಂಜುನಾಥ ಸಿದ್ದಿ ಅವರ ಮುಖಕ್ಕೆ ಕಬ್ಬಿಣದ ರಾಡಿನಿಂದ ಹೊಡೆದಿದ್ದಾರೆ. ಮಂಜುನಾಥ ಸಿದ್ದಿ ಅವರ ಪತ್ನಿ ಹೇಮಾ ಸಿದ್ದಿ ಅವರ ಜೊತೆಯೂ ಗಣೇಶ ಸಿದ್ದಿ ಅವರು ಅಸಭ್ಯವಾಗಿ ವರ್ತಿಸಿದ್ದಾರೆ.
ಮಂಜುನಾಥ ಸಿದ್ದಿ ಅವರು ಡೋಂಗ್ರಿ ಗ್ರಾಮ ಪಂಚಾಯತಗೆ ಸದಸ್ಯರಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾದ ನಂತರ ಸಾಕಷ್ಟು ಕೆಲಸ ಮಾಡಿದ್ದಾರೆ. ಅಧಿಕಾರ ಅವಧಿ ಮುಗಿದ ನಂತರ ಅವರು ಜಮೀನು ಸಮದಟ್ಟು ಮಾಡುವುದು ಹಾಗೂ ಅಗತ್ಯವಿದ್ದವರಿಗೆ ಮಣ್ಣು ಪೂರೈಕೆಯ ಕೆಲಸ ಮಾಡಿಕೊಂಡಿದ್ದಾರೆ. ಹಳವಳ್ಳಿ ಬಳಿಯ ಮಳಲಗಾವಿನ ಗಣೇಶ ಸಿದ್ದಿ ಅವರು ಒಂದು ಲಾರಿ ಮಣ್ಣು ಬೇಕಿರುವ ಬಗ್ಗೆ ಮಂಜುನಾಥ ಸಿದ್ದಿ ಅವರಿಗೆ ಹೇಳಿದ್ದಾರೆ. ಆ ಮಣ್ಣು ವ್ಯವಹಾರದ ಸಲುವಾಗಿ ಮಂಜುನಾಥ ಸಿದ್ದಿ ಅವರ ಮನೆಗೆ ಭೇಟಿ ನೀಡಿದ ಗಣೇಶ ಸಿದ್ದಿ ಅವರು ಅಲ್ಲಿದ್ದ ಹೇಮಾ ಸಿದ್ದಿ ಅವರ ಬಳಿ ಅಸಹ್ಯವಾಗಿ ಮಾತನಾಡಿದ್ದಾರೆ.
ಮಂಜುನಾಥ ಸಿದ್ದಿ ಅವರು ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಹೋಗುತ್ತಿದ್ದ ಗಣೇಶ ಸಿದ್ದಿ ಅವರು ಹೇಮಾ ಸಿದ್ದಿ ಅವರಿಗೆ ಮುಜುಗರ ಆಗುವ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ಹೇಮಾ ಸಿದ್ದಿ ಅವರು ಮಂಜುನಾಥ ಸಿದ್ದಿ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಏಪ್ರಿಲ್ 24ರಂದು ಸಹ ಗಣೇಶ ಸಿದ್ದಿ ಅವರು ಮಂಜುನಾಥ ಸಿದ್ದಿ ಅವರ ಮನೆಗೆ ಹೋಗಿದ್ದು, ಹೇಮಾ ಸಿದ್ದಿ ಅವರ ಬಳಿ `ನಿನ್ನ ಗಂಡ ಇದ್ದಾನೆಯೇ?’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮನೆಯಿಂದ ಹೊರಬಂದ ಮಂಜುನಾಥ ಸಿದ್ದಿ ಅವರ ಮೇಲೆ ಏಕಾಏಕಿ ಆಕ್ರಮಣ ಮಾಡಿದ್ದಾರೆ. ಹೊಡೆದಾಟ ತಪ್ಪಿಸಲು ಮುಂದಾದ ಹೇಮಾ ಸಿದ್ದಿ ಅವರ ಬಟ್ಟೆ ಎಳೆದು ಅವಮಾನ ಮಾಡಿದ್ದಾರೆ.
ಅದಾದ ನಂತರ ಮಂಜುನಾಥ ಸಿದ್ದಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದಿದ್ದಾರೆ. ಈ ವೇಳೆ ಗಣೇಶ ಸಿದ್ದಿ ಅವರ ತಾಯಿ ಭಾಗೀರಥಿ ಬಾಲಚಂದ್ರ ಸಿದ್ದಿ ಹಾಗೂ ಅತ್ತಿಗೆ ವನಿತಾ ಗಣಪತಿ ಸಿದ್ದಿ ಅವರು ಹೇಮಾ ಸಿದ್ದಿ ಅವರ ಮನೆ ಬಳಿ ಸುಳಿದಾಡಿದ್ದಾರೆ. ಗಾಯಗೊಂಡಿದ್ದ ಮಂಜುನಾಥ ಸಿದ್ದಿ ಅವರ ಆರೋಗ್ಯ ವಿಚಾರಣೆಗೆ ಆಗಮಿಸಿದ್ದ ಸುಜಾತಾ ನಾಗೇಂದ್ರ ಸಿದ್ದಿ ಅವರಿಗೂ ಅವರಿಬ್ಬರು ಬೈದು ನಿಂದಿಸಿದ್ದಾರೆ. ಪ್ರಶ್ನಿಸಿದಾಗ ಹೊಡೆದು ನೋವುಂಟು ಮಾಡಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಹೇಮಾ ಸಿದ್ದಿ ಅವರು ಅಂಕೋಲಾ ಪೊಲೀಸರಿಗೆ ದೂರಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ದೂರು ದಾಖಲಿಸಿದ್ದಾರೆ.