ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ಅತ್ಯಂತ ಕೆಳಮಟ್ಟದಿಂದ ವಿಮಾನ ಹಾರಾಟ ನಡೆಯುತ್ತಿದೆ. ಈ ವಿಮಾನ ಹಾರಾಟ ನೋಡಿದ ಶಿರಸಿ-ಸಿದ್ದಾಪುರ ಭಾಗದ ಜನ ಆತಂಕವ್ಯಕ್ತಪಡಿಸಿದ್ದಾರೆ. ಸದ್ಯ, ಆ ವಿಮಾನ ಹಾರಾಟಕ್ಕೆ ನೈಜ ಕಾರಣ ಏನು? ಎಂಬುದು ಗೊತ್ತಾಗಿದೆ.
ಜಿಲ್ಲೆಯ ಅನೇಕ ಕಡೆ 100-150 ಮೀಟರ್ ಎತ್ತರದಲ್ಲಿ ವಿಮಾನ ಹಾರಾಟ ನಡೆದಿದೆ. ಸಿದ್ದಾಪುರ ತಾಲ್ಲಕಿನ ಹೆಗ್ಗರಣಿ, ಹೇರೂರು, ಗೋಳಿಮಕ್ಕಿ, ಕಾನಸೂರ, ಶಿರಸಿಯ ಕುಳವೆ ಹಾಗೂ ಬನವಾಸಿ ಹೋಬಳಿಯ ಗ್ರಾಮಗಳಲ್ಲಿ ಅತಿ ಹೆಚ್ಚು ಬಾರಿ ವಿಮಾನ ಹಾರಾಟ ನಡೆಸಿದೆ. ಬೇಡ್ತಿ-ವರದಾ ನದಿ ಜೋಡಣೆ ಕಾರ್ಯಕ್ಕಾಗಿ ಈ ವಿಮಾನ ಹಾರಾಟ ನಡೆದಿರುವ ಬಗ್ಗೆ ಜನರು ಅಂದಾಜಿಸಿದ್ದು, ಸದ್ಯ ಆ ಯೋಜನೆಗೂ ಈ ವಿಮಾನ ಹಾರಾಟಕ್ಕೂ ಸಂಬoಧವಿಲ್ಲ ಎಂಬ ಸತ್ಯ ಹೊರಬಿದ್ದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾರಾಟ ನಡೆಸುತ್ತಿರುವ ವಿಮಾನ ಆಸ್ಟ್ರೇಲಿಯಾದಲ್ಲಿ ನೋಂದಾಯಿತ ಸೆಸ್ನಾ 208ಬಿ ಗ್ರಾಂಡ್ ಕಾರವಾನ್ ಮಾದರಿಯ ವೈಜ್ಞಾನಿಕ ಭೂ ಭೌತಿಕ ಸಮೀಕ್ಷೆಗೆ ಬಳಸುವ ವಿಮಾನವಾಗಿದೆ. ಭೂಮಿಯ ಚುಂಬಕ ವ್ಯತ್ಯಾಸಗಳನ್ನು ಪತ್ತೆಹಚ್ಚುವ ಸಾಮರ್ಥ್ಯವುಳ್ಳ ಮ್ಯಾಗ್ನೆಟೋ ಮೀಟರ್ ಸ್ಟಿಂಗರ್ ಸಾಧನವನ್ನು ಈ ವಿಮಾನಕ್ಕೆ ಅಳವಡಿಸಲಾಗಿದೆ. ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಸಂಸ್ಥೆಯೂ National Aero geophysical Mapping Programme (NAGMP) ಭಾಗವಾಗಿ NAGMP Block-7 ಸರ್ವೇ ಕೆಲಸಕ್ಕಾಗಿ ಈ ವಿಮಾನ ಹಾರಾಟ ನಡೆಸುತ್ತಿದೆ. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದಲ್ಲಿ ಈ ಸರ್ವೇ ಕೆಲಸ ನಡೆಯುತ್ತಿದೆ.
ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿಕೊಂಡ ವಿಮಾನ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಿದ್ದು, ಈ ಸರ್ವೇಯಿಂದ ಸಿಕ್ಕ ಅಂಶಗಳನ್ನು ಖನಿಜಾನ್ವೇಷಣೆಯಲ್ಲಿ ತೊಡಗಿರುವ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ನೀಡಲಾಗುತ್ತದೆ. ಜನ ಸಾಮಾನ್ಯರು ಸಹ ಇದನ್ನು ಗಮನಿಸುವುದಕ್ಕಾಗಿ National Geoscience Data Repository (NGDR) ವೆಬ್ಸೈಟ್ ಮೂಲಕ ಪ್ರಕಟಿಸಲಾಗಿದೆ. `ವಿಮಾನ ಹಾರಾಟ ವಿಷಯವಾಗಿ ಆತಂಕ ಬೇಡ’ ಎಂದು ಜಿಲ್ಲಾಡಳಿತ ಹೇಳಿದೆ.