`ಅರಣ್ಯ ಹಕ್ಕು ಕಾಯಿದೆ ಅನುಷ್ಟಾನವು ಕಾನೂನಾತ್ಮಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಕಾನೂನಿಗೆ ವ್ಯತಿರಿಕ್ತವಾಗಿ ಮಂಜೂರಿ ಪ್ರಕ್ರಿಯೆ ನಡೆಸಿದ ಹಿನ್ನಲೆಯಲ್ಲಿ ದೇಶದಲ್ಲಿ ಹಕ್ಕು ಪತ್ರ ವಿತರಣೆಯ ಅಂಕೆ ಸಂಖ್ಯೆಯಲ್ಲಿ ಕರ್ನಾಟಕ 16ನೇ ಸ್ಥಾನದಲ್ಲಿದೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ.
ಶಿರಸಿಯ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಅರಣ್ಯವಾಸಿಗಳ ಜೊತೆ ಚರ್ಚೆ ನಡೆಸಿದ ಅವರು ಈ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. `ದೇಶದ ಇಪ್ಪತ್ತೋಂದು ರಾಜ್ಯಗಳಲ್ಲಿ 5,123,104 ಅರ್ಜಿಗಳನ್ನು ಅರಣ್ಯ ಹಕ್ಕು ಕಾಯಿದೆಯಲ್ಲಿ ಸಲ್ಲಿಸಿದ್ದು ಅವುಗಳಲ್ಲಿ 25,11,375 ಅರ್ಜಿಗಳ ಹಕ್ಕು ಪತ್ರ ವಿತರಿಸಲಾಗಿದೆ. ದೇಶದಲ್ಲಿ 18,62,056 ಅರ್ಜಿಗಳು ತಿರಸ್ಕಾರವಾಗಿದೆ’ ಎಂದವರು ವಿವರಿಸಿದರು. `ಪ್ರಥಮ ಹಂತದ ಮಂಜೂರಿ ಪ್ರಕ್ರಿಯೆಯಲ್ಲಿ 8,44,530 ಅರ್ಜಿಗಳು ಉತ್ತರ ಕನ್ನಡದಲ್ಲಿ ಸ್ವೀಕರಿಸಿದ್ದು, 2,863 ಅರ್ಜಿಗಳಿಗೆ ಮಾನ್ಯತೆ ದೊರಕಿದೆ. 73,859 ಅರಣ್ಯವಾಸಿಯ ಅರ್ಜಿಗಳು ತಿರಸ್ಕಾರವಾಗಿರುವುದು ವಿಷಾಧನೀಯ’ ಎಂದರು.
`ಮAಜೂರಿ ಪ್ರಕ್ರಿಯೆಯಲ್ಲಿ ಮೂರು ತಲೆಮಾರಿನ ದಾಖಲೆ ಒತ್ತಾಯಿಸುವಿಕೆ ಮತ್ತು ಕಾನೂನಿಗೆ ವ್ಯಕ್ತಿರಿಕ್ತವಾಗಿ ಪ್ರಕ್ರಿಯೆ ಜರುಗಿಸುವುದರಿಂದ ಶೇ 73ರಷ್ಟು ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ’ ಎಂದರು. ಸಂಘಟನೆ ಸಂಚಾಲಕ ಯಾಕುಬ್ ಸಾಬ, ಜೆ ಜೆ ಕುರಿಯಾ ಕೊಸ್ , ಶಿವರಾಮ ಮಾಬ್ಲೇಶ್ವರ ಗೌಡ , ವೆಂಕಟ ಹೊನ್ನಪ್ಪ ಗೌಡ, ರಾಘವೇಂದ್ರ ಬೀರಪ್ಪ ಗೌಡ, ರೇವು ಯಂಕು ಮರಾಠಿ, ವಿನಾಯಕ ದುರ್ಗು ಮುಕ್ರಿ, ಸುರೇಶ ರಾಮ ಮರಾಠಿ, ಗಣಪತಿ ಮಾಸ್ತಿ ಅಡಿಗುಂಡಿ, ಮಾಬ್ಲೇಶ್ವರ ಕೃಷ್ಣ ಗೌಡ, ಕೃಷ್ಣ ಮಾಬ್ಲೇಶ್ವರ ಗೌಡ, ನಾಗು ನಾಗು ಗೌಡ, ರಾಘು ಹನುಮಂತ ನಾಯ್ಕ, ಮಂಜುನಾಥ ಗೌಡ, ಮಂಜುನಾಥ ತುಳಸು ಗೌಡ ಇತರರಿದ್ದರು.