ಮಗನಿಗೆ ಹುಷಾರಿಲ್ಲದ ಕಾರಣ ಅಂಕೋಲಾ ಅಂಬಾರಕೊಡ್ಲದ ಕೃಷ್ಣ ನಾಯ್ಕ ಅವರು ಆರ್ಯ ಆಸ್ಪತ್ರೆಗೆ ದೌಡಾಯಿಸಿದ್ದು, ಬಡಗೇರಿಯ ಗಂಗಾಧರ ಗೌಡ ಅವರು ಆಸ್ಪತ್ರೆ ಎದುರೇ ಕೃಷ್ಣ ನಾಯ್ಕ ಅವರನ್ನು ಅಡ್ಡಗಟ್ಟಿದ್ದಾರೆ. ಹಣಕಾಸು ವಿಷಯವಾಗಿ ಪ್ರಶ್ನಿಸಿ ಅಲ್ಲಿಯೇ ಕೃಷ್ಣ ನಾಯ್ಕ ಅವರ ಮೇಲೆ ಆಕ್ರಮಣ ಮಾಡಿದ್ದಾರೆ.
ಅಂಕೋಲಾದ ಶಿರಕುಳಿ ಬಳಿಯ ಅಂಬಾರಕೊಡ್ಲದಲ್ಲಿ ಕೃಷ್ಣ ಅನಂತ ನಾಯ್ಕ ಅವರು ವಾಸವಾಗಿದ್ದಾರೆ. ಅವರು ವಿವಿಧ ವ್ಯವಹಾರ ಮಾಡಿಕೊಂಡಿದ್ದು, ಕೃಷ್ಣ ನಾಯ್ಕ ಅವರ ಪತ್ನಿ ಸುಮಂಗಲಾ ನಾಯ್ಕ ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಹೀಗಿರುವಾಗ ಬಡಗೇರಿಯ ಗಂಗಾಧರ ಗೌಡ ಅವರು ಕೃಷ್ಣ ನಾಯ್ಕ ಅವರ ಜೊತೆ ಹಣಕಾಸಿನ ವ್ಯವಹಾರ ಮಾಡಿದ್ದಾರೆ. ಆ ವ್ಯವಹಾರದಲ್ಲಿನ ಅಸಮಧಾನದಿಂದಾಗಿ ಅವರು ಕೋರ್ಟಿನಲ್ಲಿ ಕೇಸು ಹಾಕಿದ್ದಾರೆ.
ಈ ಎಲ್ಲದರ ನಡುವೆ ಮೇ 5ರ ರಾತ್ರಿ ಕೃಷ್ಣ ನಾಯ್ಕ ಅವರ ಮಗನಿಗೆ ಅನಾರೋಗ್ಯ ಕಾಡಿದೆ. ಮಗನನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸುವುದಕ್ಕಾಗಿ ಕೃಷ್ಣ ನಾಯ್ಕ ಹಾಗೂ ಸುಮಂಗಲ ನಾಯ್ಕ ದಂಪತಿ ಪ್ರಯತ್ನಿಸಿದ್ದಾರೆ. ಮಗನನ್ನು ಕಾರಿನಲ್ಲಿ ಕೂರಿಸಿಕೊಂಡು ಅವರು ಆರ್ಯ ಆಸ್ಪತ್ರೆ ಬಳಿ ಹೋಗಿದ್ದಾರೆ. ಈ ವೇಳೆ ಸ್ಕೂಟಿಯಲ್ಲಿ ಬಂದ ಗಂಗಾಧರ ಗೌಡ ಅವರು ಆ ಕಾರನ್ನು ಅಡ್ಡಗಟ್ಟಿದ್ದಾರೆ.
ಗಂಗಾಧರ ಗೌಡ ಹಾಗೂ ಕೃಷ್ಣ ನಾಯ್ಕ ಅವರ ನಡುವೆ ಈ ವೇಳೆ ಗಲಾಟೆ ನಡೆದಿದೆ. `ಹಣ ಕೊಡು’ ಎಂದು ಗಂಗಾಧರ ಗೌಡ ಅವರು ಹೇಳಿದ್ದಾರೆ. `ಕೇಸು ಮುಗಿದ ಮೇಲೆ ಕೊಡುವೆ’ ಎಂದು ಕೃಷ್ಣ ನಾಯ್ಕ ಅವರು ಹೇಳಿದ್ದಾರೆ. ಇದರಿಂದ ಸಿಟ್ಟಾದ ಗಂಗಾಧರ ಗೌಡ ಅವರು ಕಾರಿನಲ್ಲಿ ಕುಳಿತಿದ್ದ ಕೃಷ್ಣ ನಾಯ್ಕ ಅವರಿಗೆ ಕೈ ಮುಷ್ಟಿಯಿಂದ ಹೊಡೆದಿದ್ದಾರೆ. ಅದಾದ ನಂತರ ಅಲ್ಲಿ ಜನ ಸೇರಿದ್ದು, ಜನ ಬರುವುದನ್ನು ನೋಡಿ ಪರಾರಿಯಾಗಿದ್ದಾರೆ. ಮಗನನ್ನು ಆಸ್ಪತ್ರೆಗೆ ಸೇರಿಸಲು ಬಂದಿದ್ದ ಕೃಷ್ಣ ನಾಯ್ಕ ಅವರು ಚಿಕಿತ್ಸೆಪಡೆದು ಮನೆಗೆ ಮರಳಿದ್ದಾರೆ.