ಕಳೆದ ಮೂರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಶುರುವಾಗಿದ್ದು, ಈ ವರ್ಷವೂ ಮಳೆ ಮಾಪನ ಯಂತ್ರ ಸರಿಯಾಗುವ ಲಕ್ಷಣಗಳಿಲ್ಲ. ಮಳೆ ಮಾಪನ ಯಂತ್ರದ ದೋಷದಿಂದಾಗಿ ರೈತರಿಗೆ ಬೆಳೆ ವಿಮೆ ಪರಿಹಾರ ಸರಿಯಾಗಿ ಸಿಗುತ್ತಿಲ್ಲ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಉಂಟಾಗಿರುವ ಅವ್ಯವಸ್ಥೆ ಹಾಗೂ ಮಳೆ ಮಾಪನ ಕೇಂದ್ರಗಳ ವೈಫಲ್ಯ ಖಂಡಿಸಿ ಶನಿವಾರ ಬಿಜೆಪಿಗರು ಶಿರಸಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. `ರೈತರಿಗೆ ನ್ಯಾಯಬದ್ಧ ವಿಮೆ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಪತ್ರ ರವಾನಿಸಿದ್ದಾರೆ. ಸಾಕಷ್ಟು ರೈತರು ಬಿಜೆಪಿ ಪ್ರತಿಭಟನೆಗೆ ಧ್ವನಿಗೂಡಿಸಿದ್ದು, ಸಮಸ್ಯೆಯ ಗಂಭೀರತೆಯ ಬಗ್ಗೆ ಭಾಷಣದ ಮೂಲಕ ವಿವರಿಸಿದ್ದಾರೆ.
`ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ರೈತ ಸಮುದಾಯವು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಗಂಭೀರ ಲೋಪದೋಷಗಳಿಂದ ಕೂಡಿದೆ. ಅದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಜಿಲ್ಲೆಯಾದ್ಯಂತ ಸ್ಥಾಪಿಸಲಾದ ಅನೇಕ ಮಳೆ ಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ. `ಮಳೆಯ ನಿಖರ ಮಾಹಿತಿ ದಾಖಲಾಗದಿರುವುದರಿಂದ ನಿಜವಾಗಿಯೂ ಬೆಳೆ ಹಾನಿಗೊಳಗಾದ ರೈತರಿಗೆ ಸಮಸ್ಯೆಯಾಗಿದೆ. ನಷ್ಟಕ್ಕೆ ಒಳಗಾದವರಿಗೆ ಪರಿಹಾರ ಸಿಗುತ್ತಿಲ್ಲ’ ಎಂದಿದ್ದಾರೆ.
ಬಿಜೆಪಿ ಮಾಧ್ಯಮ ವಕ್ತಾರ ಸದಾನಂದ ಭಟ್, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಪ್ರಮುಖರಾದ ರವಿ ಹೆಗಡೆ, ಪ್ರಸಾದ ಹೆಗಡೆ, ರಾಘವೇಂದ್ರ ಭಟ್, ಆರ್ ಡಿ ಹೆಗಡೆ, ನರಸಿಂಹ ಹೆಗಡೆ ಸೇರಿ ಕಾಂಗ್ರೆಸ್ ಆಡಳಿತದ ವಿರುದ್ಧ ಗರಂ ಆಗಿದ್ದಾರೆ. ಮಳೆ ಮಾಪನ ಯಂತ್ರ ಸರಿಯಾಗದೇ ಇದ್ದರೆ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ.