ಹುಲಿ ಗಣತಿ ಕಾರ್ಯ ನಡೆಸಲು ಅಂಕೋಲಾದ ಕಾಡಿನಲ್ಲಿ ಅಳವಡಿಸಿದ್ದ ಕ್ಯಾಮರಾವನ್ನು ಕಳ್ಳರು ಕದ್ದಿದ್ದಾರೆ. ಹೊಸಕಂಬಿ ಅರಣ್ಯ ಪ್ರದೇಶದಲ್ಲಿನ ಕ್ಯಾಮರಾ ಕಾಣೆಯಾಗಿದ್ದು, ಇದರಿಂದ ಗಣತಿ ಕಾರ್ಯಕ್ಕೆ ಸಮಸ್ಯೆ ಶುರುವಾಗಿದೆ.
ಮೇ 1ರಿಂದ 25ರವರೆಗೆ ಆಲ್ ಇಂಡಿಯಾ ಟೈಗರ್ ಎಸ್ಟಿಮೇಶನ್ ಕಾರ್ಯಾಚರಣೆ ನಡೆಯುತ್ತಿದೆ. ಇದರ ಭಾಗವಾಗಿ ಹೊಸಕಂಬಿ ವಲಯದ ಮಾಣಿಕಾರ ತಿಂಗಳಬೈಲ್ ಅರಣ್ಯ ಪ್ರದೇಶದಲ್ಲಿ `ಕಡಿಬ್ಯಾಕ್’ ಕಂಪನಿಯ ಎರಡು ಆಫ್ಲೈನ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪ್ರತಿ ಐದು ದಿನಗಳಿಗೊಮ್ಮೆ ಕ್ಯಾಮೆರಾದ ಮೆಮೊರಿ ಕಾರ್ಡ್ ಬದಲಾಯಿಸಿ, ಅದರಲ್ಲಿನ ಮಾಹಿತಿಯನ್ನು ರೇಂಜ್ ಫಾರೆಸ್ಟ್ ಕಚೇರಿಯ ಕಂಪ್ಯುಟರಿನಲ್ಲಿ ದಾಖಲು ಮಾಡಲಾಗುತ್ತಿತ್ತು. ಮೇ 11ರಂದು ಕೊನೆಯದಾಗಿ ಡೇಟಾ ಸಂಗ್ರಹಣೆ ನಡೆಸಲಾಗಿತ್ತು. ಮೇ 12ರಂದು ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಕ್ಯಾಮೆರಾ ಅಲ್ಲಿಯೇ ಇತ್ತು.
ಆದರೆ, ಮೇ 13ರಂದು ಕರ್ತವ್ಯಕ್ಕೆ ಹೋದ ಸಿಬ್ಬಂದಿಗೆ ಕ್ಯಾಮೆರಾ ಕಾಣಿಸಿಲ್ಲ. ಎಲ್ಲಾ ಕಡೆ ಹುಡುಕಿದರೂ ಸಿಕ್ಕಿಲ್ಲ. ಈ ಹಿನ್ನಲೆ ಸಿಬ್ಬಂದಿ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಸುಮಾರು 25 ಸಾವಿರ ರೂ ಮೌಲ್ಯದ ಎರಡು ಕ್ಯಾಮೆರಾ ಕಾಣೆಯಾದ ಬಗ್ಗೆ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಗುರುರಾಜ ಜಿರಗಾಳೆ ಅವರು ಮಾಹಿತಿ ನೀಡಿದ್ದಾರೆ. ಈ ಹಿನ್ನಲೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ, ಕ್ಯಾಮರಾ ಹುಡುಕಾಟ ನಡೆಸಿದ್ದಾರೆ.