35 ವರ್ಷದ ಹಿಂದೆ ಕಾರವಾರದ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದಲ್ಲಿ ಕಲಿತ ವಿದ್ಯಾರ್ಥಿಗಳು ಇದೀಗ ಮತ್ತೆ ಅದೇ ಶಾಲೆಗೆ ಭೇಟಿ ನೀಡಿದ್ದು, ಎಲ್ಲರೂ ಸೇರಿ `ಗುರು ವಂದನಾ’ ಕಾರ್ಯಕ್ರಮ ನಡೆಸಿದ್ದಾರೆ.
1991ರಲ್ಲಿ ಎಸ್ ಎಸ್ ಎಲ್ ಸಿ ಓದಿದ ಮಕ್ಕಳು ದಿಲೀಪ್ ಸಾಳುಂಕೆ ಅವರ ಸಾರಥ್ಯದಲ್ಲಿ ಈ ಕಾರ್ಯಕ್ರಮ ಸಂಘಟಿಸಿದ್ದಾರೆ. ಶಾಲೆಯ ಪ್ರಥಮ ಬ್ಯಾಚಿನ ವಿದ್ಯಾರ್ಥಿಯಾಗಿರುವ ಕೃಷ್ಣಾನಂದ ಸಾಳುಂಕೆ ಅವರು ಸದ್ಯ ಗೆಜೆಟಡ್ ಅಧಿಕಾರಿಯಾಗಿ ನಿವೃತ್ತರಾಗಿದ್ದು,`ನಮ್ಮ ಊರು ನಮ್ಮ ಹೆಮ್ಮೆ’ ಎಂದು ಸಂತಸದ ಮಾತನಾಡಿದ್ದಾರೆ. ದಾಂಡೇಲಿ ನಗರಸಭೆಯ ಮಾಜಿ ಅಧ್ಯಕ್ಷ ನಾಗೇಶ ಸಾಳುಂಕೆ ಅವರು ಸಹ ಈ ಶಾಲೆಯ ಮಾಜಿ ವಿದ್ಯಾರ್ಥಿಯಾಗಿದ್ದು, `ಶಿವಾಜಿ ವಿದ್ಯಾ ಮಂದಿರಕ್ಕೆ ತನ್ನದೆ ಆದ ಇತಿಹಾಸವಿದೆ. ಆ ದಾಖಲೆ ಹೀಗೇ ಮುಂದುವರೆಯಲಿ’ ಎಂದು ಹಾರೈಸಿದ್ದಾರೆ.
1974ರ ಮೆಟ್ರಿಕ್ ವಿದ್ಯಾರ್ಥಿ ಮುಖ್ಯವಾಗಿ ರಾಜ್ಯ ಮಟ್ಟದಲ್ಲಿ ಶಾಲೆಯಿಂದ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದ ನಿವೃತ್ತ ಯೋಧರಾದ ಶಾಂತರಾಮ ಸಾಳುಂಕೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. `ಕ್ರೀಡೆಯ ಅರಿವು ಎಲ್ಲದಕ್ಕೂ ಮಿಗಿಲು’ ಎನ್ನುತ್ತ ಅವರು ಭಾವುಕರಾದರು. ಶಾಲೆಯ ನಿವೃತ್ತ ನೌಕರರಾದ ಶಶಿಕಾಂತ ಸಾಳುಂಕೆ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯೂ ಆಗಿರುವ ನ್ಯಾಯವಾದಿ ಸಂಜಯ ಸಾಳುಂಕೆ ಅವರು ಕಾರ್ಯಕ್ರಮದಲ್ಲಿ ಸಂತಸದಿAದ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಗಿರೀಶ್ ದೇಸಾಯಿ ಅವರು ವೇದಿಕೆಯಲ್ಲಿದ್ದರು.
ಶಾಲೆಯ ನಿವೃತ್ತ ಮುಖ್ಯಾಧ್ಯಪಕರಾದ ಸುಮನ್ ನಾಯ್ಕ ಹಾಗೂ ಪ್ರಸ್ತುತ ಮುಖ್ಯ ಗುರುಗಳಾದ ಗಣೇಶ ಬಿಷ್ಟಣ್ಣನವರ.ನಿವೃತ್ತ ಶಾಲಾ ಸಿಬ್ಬಂದಿ ಶಶಿಕಾಂತ ಸಾಳುಂಕೆ ಜೊತೆಗೆ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಪ್ರೇಮಾನಂದ ಸಾಳುಂಕೆ, ಮೋಹನ ಸಾಳುಂಕೆ, ಕೃಷ್ಣಾನಂದ ಸಾಳುಂಕೆ ಹಾಗೂ ನಾಗೇಶ ಸಾಳುಂಕೆ ಅವರನ್ನು ಸನ್ಮಾನಿಸಲಾಯಿತು. 1974 ರಲ್ಲಿ ಶಾಲೆಯಿಂದ ರಾಜ್ಯ ಮಟ್ಟಕ್ಕೆ ಸಾಗಿದ್ದ ಕಬಡ್ಡಿ ಆಟಗಾರರ ಜೊತೆ ಪ್ರಸಕ್ತ ವರ್ಷ ಎಸ್ ಎಸ್ ಎಲ್ ಸಿಯಲ್ಲಿ ಶಾಲೆಗೆ ಪ್ರಥಮ ಬಂದ ಅಶ್ವಿತಾ ದೇಸಾಯಿ ಅವರನ್ನು ಗೌರವಿಸಲಾಯಿತು. ನಿವೃತ್ತ ಯೋಧ ದಿಲೀಪ ಸಾಳುಂಕೆ, ಮಾಯಾ ಎಸ್ ಸಾಳುಂಕೆ, ಗುರುನಾಥ ಆರ್ ನಾಯ್ಕ ಕಾರ್ಯಕ್ರಮದಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದರು.