ಅಂಕೋಲಾದ ಸಂಗೀತಾ ಮಡಿವಾಳ ಹಾಗೂ ಅವರ ಅಣ್ಣ ರಾಜು ನಾಯ್ಕ ನಡುವೆ ಆಸ್ತಿ ವಿಷಯವಾಗಿ ಕಲಹ ಶುರುವಾಗಿದೆ. ರಾಜು ನಾಯ್ಕ ಅವರ ಪತ್ನಿ ರಾಜೇಶ್ವರಿ ನಾಯ್ಕ ಅವರು ಇದೇ ಕಾರಣದಿಂದ ಸಂಗೀತಾ ಮಡಿವಾಳ ಅವರ ಜೊತೆ ಮುನಿಸಿಕೊಂಡಿದ್ದಾರೆ.
ಅoಕೋಲಾದ ಹಾರವಾಡದಲ್ಲಿ ಸಂಗೀತಾ ಪ್ರವೀಣ ಮಡಿವಾಳ ಅವರು ವಾಸವಾಗಿದ್ದಾರೆ. ಅವರ ಅಣ್ಣ ರಾಜು ನಾಯ್ಕ ಅವರು ತಮ್ಮ ಪತ್ನಿ ರಾಜೇಶ್ವರಿ ನಾಯ್ಕ ಅವರ ಜೊತೆ ಅದೇ ಊರಿನಲ್ಲಿ ವಾಸವಾಗಿದ್ದಾರೆ. ಈ ಎರಡು ಕುಟುಂಬದ ನಡುವೆ ಆಸ್ತಿ ವಿಷಯವಾಗಿ ವೈಮನಸ್ಸಿದ್ದು, ಅದು ಎರಡು ಕಡೆಯವರ ನೆಮ್ಮದಿ ಕೆಡಿಸಿದೆ.
ಸೆಪ್ಟೆಂಬರ್ 14ರಂದು ಸಹ ಆಸ್ತಿ ವಿಷಯ ಈ ಎರಡು ಕುಟುಂಬದವರ ನಡುವಿನ ಜಟಾಪಟಿಗೆ ಕಾರಣವಾಗಿದೆ. ಆ ದಿನ ಸಂಜೆ 4.30ಕ್ಕೆ ಸಂಗೀತಾ ಮಡಿವಾಳ ಅವರು ಮಾಘ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದರು. ಹಬ್ಬದ ಸಂಭ್ರಮದ ಬಗ್ಗೆ ಅವರು ಹೇಳುತ್ತಿರುವಾಗ ರಾಜೇಶ್ವರಿ ನಾಯ್ಕ ಅವರು ಮದ್ಯೆ ಮಾತನಾಡಿದರು. ರಾಜು ನಾಯ್ಕ ಅವರು ಆ ಮಾತಿಗೆ ಧ್ವನಿಯಾದರು.
ಈ ಮಾತುಕಥೆ ಜಗಳದ ಸ್ವರೂಪಪಡೆಯಿತು. ರಾಜು ನಾಯ್ಕ, ರಾಜೇಶ್ವರಿ ನಾಯ್ಕ ಹಾಗೂ ಸಂಗೀತಾ ಮಡಿವಾಳರ ನಡುವೆ ಕಲಹ ಶುರುವಾಯಿತು. ರಾಜು ನಾಯ್ಕ ಹಾಗೂ ರಾಜೇಶ್ವರಿ ನಾಯ್ಕ ಸೇರಿ ಸಂಗೀತಾ ಮಡಿವಾಳ ಅವರ ಮೈ ಮುಟ್ಟಿದರು. ಅವರನ್ನು ದೂಡಿ ನೆಲಕ್ಕೆ ಬೀಳಿಸಿದರು. ಆಸ್ತಿ ವಿಚಾರದ ಬಗ್ಗೆ ಅವರು ಜಗಳ ಮಾಡಿ ರಂಪಾಟ ಮಾಡಿದರು. ಹಬ್ಬದ ಮಾತುಕಥೆ ಅಲ್ಲಿಗೆ ಮುಕ್ತಾಯವಾದ ಬಗ್ಗೆ ಸಂಗೀತಾ ಮಡಿವಾಳ ಅವರು ಬೇಸರಿಸಿಕೊಂಡರು.
ತಮ್ಮ ಮೈ ಮುಟ್ಟಿದ ಅಣ್ಣ-ಅತ್ತಿಗೆಯ ವಿರುದ್ಧ ಸಂಗೀತಾ ಮಡಿವಾಳ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಅಂಕೋಲಾ ಪೊಲೀಸರು ಎರಡು ಕಡೆಯವರಿಗೆ ಸಮಾಧಾನ ಮಾಡಿ ಕಳುಹಿಸಿದರು. ಆದರೆ, ಇದಕ್ಕೆ ತೃಪ್ತರಾಗದ ಸಂಗೀತಾ ಮಡಿವಾಳ ಅವರು ಕೋರ್ಟಿನ ಮೊರೆ ಹೋದರು. ತಮ್ಮ ಮೈ ಮುಟ್ಟಿದವರಿಗೆ ಶಿಕ್ಷೆ ಆಗಬೇಕು ಎಂದು ನ್ಯಾಯಾಧೀಶರಲ್ಲಿ ಕೇಳಿಕೊಂಡರು. ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದರು.