ಭಟ್ಕಳದ ಮುರಿನಕಟ್ಟೆ ಧ್ವಂಸ ಮಾಡಿದ್ದನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿಗರು ಉಗ್ರ ಹೋರಾಟ ನಡೆಸಿದ್ದಾರೆ. ಘಟಾನುಘಟಿ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
`ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೆಟ್ಟ ಉದ್ದೇಶದಿಂದ ಯಾವ ಜಾಗದಲ್ಲಿ ಮುರಿನಕಟ್ಟೆಯನ್ನು ಕೆಡವಿ ಹಾಕಲಾಗಿದೆಯೋ ಅದೇ ಜಾಗದಲ್ಲಿ ನಾವು ಮರಳಿ ಕಟ್ಟೆಯನ್ನು ಕಟ್ಟಿಯೇ ಕಟ್ಟುತ್ತೇವೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಪ್ರತಿಭಟನೆಯಲ್ಲಿ ಹೇಳಿದ್ದಾರೆ. `ನಮ್ಮ ಈ ಹೋರಾಟದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಟ್ಟಾಗಿ ಮುನ್ನಡೆಯುತ್ತೇವೆ. ಇದಕ್ಕಾಗಿ ಮುಂದಿನ ಅಧಿವೇಶನದವರೆಗೂ ಕಾಯುವ ಅಗತ್ಯವಿಲ್ಲ. ಕೂಡಲೇ ಅದೇ ಜಾಗದಲ್ಲಿ ಕಟ್ಟೆ ನಿರ್ಮಾಣವಾಗಬೇಕು’ ಎಂದು ಕಾಗೇರಿ ಆಗ್ರಹಿಸಿದರು. ಪೊಲೀಸ್ ಇಲಾಖೆಯ ನಡೆ ಹಾಗೂ ತಾರತಮ್ಯದ ನೀತಿಯನ್ನು ಅವರು ಖಂಡಿಸಿದರು.
`ಕೇವಲ ವಾಟ್ಸಪ್ ಸಂದೇಶವನ್ನು ಫಾರ್ವರ್ಡ್ ಮಾಡಿದ ಹಿಂದೂಗಳನ್ನು ತಕ್ಷಣವೇ ಹಿಡಿದುಕೊಂಡು ಹೋಗುವ ಪೊಲೀಸರು ಇಡೀ ಕಟ್ಟೆಯನ್ನು ಧ್ವಂಸ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಿಲ್ಲ. ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಸಾವಿರಾರು ಜನರ ಪೈಕಿ ಕೇವಲ ಆರು ಜನರನ್ನು ಮಾತ್ರ ಬಂಧಿಸಿರುವುದು ಯಾವ ನ್ಯಾಯ?’ ಎಂದು ಪ್ರಶ್ನಿಸಿದರು. `ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ತಕ್ಷಣವೇ ಬಂಧಿಸಬೇಕು’ ಎಂದು ಅವರು ಒತ್ತಾಯಿಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಸಿಅಶೋಕ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಭಾಷಣ ಮಾಡಿದರು. ಹಿಂದೂ ಮುಖಂಡರಾದ ಸುನಿಲ್ ನಾಯ್ಕ, ಗೋವಿಂದ್ ನಾಯ್ಕ ಸೇರಿದಂತೆ 15ಕ್ಕೂ ಹೆಚ್ಚು ಪ್ರಮುಖರು ಶಾಂತವಾಗಿದ್ದರೂ ಅವರ ಮೇಲೆ ರಾಜಕೀಯ ಒತ್ತಡದಿಂದಾಗಿ ಅನಗತ್ಯವಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆಪಾದಿಸಿದರು.
ಈ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನಿಲ್ ಹೆಗಡೆ ಸೇರಿದಂತೆ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು