ಅಂಕು-ಡೊoಕಾದ ತೆಂಗಿನ ಮರವನ್ನು ಚೈನ್‌ಪುಲ್ಲಿ ಬಳಸಿ ನೇರ ಮಾಡುವ ಹೊನ್ನಾವರದ ಮಂಜುನಾಥ ಮುಕ್ರಿ ಅವರು ಆ ಕೆಲಸ ಮಾಡುವಾಗಲೇ ಮರದಿಂದ ಬಿದ್ದು ಸಾವನಪ್ಪಿದ್ದಾರೆ. 8 ಅಡಿ ಎತ್ತರದಿಂದ ನೆಲಕ್ಕೆ ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅದರಿಂದ ಪ್ರಯೋಜನ ಆಗಲಿಲ್ಲ.
ಹೊನ್ನಾವರದ ಕಕ್ಕಾರ ಹೂಜಿಮುರಿಯ ಮಂಜುನಾಥ ಮುಕ್ರಿ (46) ಅವರು ಬಾಲ್ಯದಿಂದಲೂ ಶ್ರಮಜೀವಿ ಆಗಿದ್ದರು. ಅಂಕು-ಡೊ0ಕಾದ ಅಡಿಕೆ ಮರವನ್ನು ಸಹ ಅವರು ನೇರ ಮಾಡುವ ಚಾಣಾಕ್ಷತನಹೊಂದಿದ್ದರು. ಜೊತೆಗೆ ವಿದ್ಯುತ್ ರಿಪೇರಿಯಂಥ ಇಲೆಕ್ಟಿçಕಲ್ ಕೆಲಸವನ್ನು ಅವರು ಜವಾಬ್ದಾರಿಯಿಂದ ಮಾಡುತ್ತಿದ್ದರು. ಹೀಗಾಗಿ ಕಡತೋಕ ಹೆಬ್ಳೆಕೊಪ್ಪದ ಮಂಜುನಾಥ ರಾಮಕೃಷ್ಣ ಭಟ್ಟರ ಮನೆ ಕೆಲಸಕ್ಕೆ ಹೋಗಿದ್ದರು. ಅಲ್ಲಿರುವ ತೆಂಗಿನಮರಗಳನ್ನು ನೇರ ಮಾಡುವ ಬಗ್ಗೆ ಅವರು ಮಾತನಾಡಿದ್ದರು.
ಮಂಗಳವಾರ ಈ ಕೆಲಸಕ್ಕಾಗಿ ಮಂಜುನಾಥ ಮುಕ್ರಿ ಅವರು ಕಡತೋಕ ಹೆಬ್ಳೆಕೊಪ್ಪದ ಗೋಪಾಲಕೃಷ್ಣ ಭಟ್ಟ, ಗಣೇಶ ಭಟ್ಟ, ನಾರಾಯಣ ಮುಕ್ರಿ ಅವರ ಜೊತೆ ಸೇರಿ ತೋಟದಲ್ಲಿದ್ದ ತೆಂಗಿನ ಮರಗಳನ್ನು ನೇರ ಮಾಡುವ ಕೆಲಸ ಶುರು ಮಾಡಿದ್ದರು. ಒಂದೋoದೇ ಮರ ಸರಿ ಮಾಡುತ್ತ ಅವರೆಲ್ಲರೂ ತೋಟ ಸುತ್ತಾಡಿದರು. ಮಧ್ಯಾಹ್ನ 12ಗಂಟೆಯವರೆಗೂ ಎಲ್ಲಾ ಕೆಲಸ ಸರಾಗವಾಗಿ ಸಾಗಿತು. ಅದಾದ ನಂತರ ಮಂಜುನಾಥ ಮುಕ್ರಿ ಅವರು ಇನ್ನೊಂದು ತೆಂಗಿನ ಮರಕ್ಕೆ ತಮ್ಮ ಬಳಿಯಿದ್ದ ಸ್ಟಾಂಡ್ ಹಾಕಿದರು. 8 ಅಡಿ ಎತ್ತರದಲ್ಲಿ ಮಣೆ ಕಟ್ಟಿ ಅದರ ಮೇಲೆ ಕುಳಿತು ಚೈನ್‌ಪುಲ್ಲಿ ಎಳೆಯಲು ಶುರು ಮಾಡಿದರು.
ಈ ವೇಳೆ ಅವರು ಆಯತಪ್ಪಿ ನೆಲಕ್ಕೆ ಬಿದ್ದಿದ್ದು, ನಂತರ ಮಾತನಾಡಲಿಲ್ಲ. ಮಂಜುನಾಥ ಮುಕ್ರಿ ಅವರ ಭಾವ ರಾಜೇಶ ಮುಕ್ರಿ ಅವರಿಗೆ ಗೋಪಾಲಕೃಷ್ಣ ಭಟ್ಟರು ವಿಷಯ ಮುಟ್ಟಿಸಿದರು. ಅಲ್ಲಿನ ಪುರಂದರ ಮುಕ್ರಿ ಅವರ ಜೊತೆ ಕೇರಿಯ ಜನ ಬಂದು ಮಂಜುನಾಥ ಮುಕ್ರಿ ಅವರನ್ನು ರಿಕ್ಷಾ ಮೇಲೆ ಹಾಕಿದರು. ಕಡತೋಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ಅಲ್ಲಿನ ವೈದ್ಯರು ಬೇರೆ ಕಡೆ ಹೋಗುವಂತೆ ತಿಳಿಸಿದರು. ಖಾಸಗಿ ಆಂಬುಲೆನ್ಸ ಮೂಲಕ ಮಂಜುನಾಥ ಮುಕ್ರಿ ಅವರನ್ನು ಹೊನ್ನಾವರ ಆಸ್ಪತ್ರೆಗೆ ತರಲಾಯಿತು. ಆದರೆ, ಈಗಾಗಲೇ ಮಂಜುನಾಥ ಮುಕ್ರಿ ಸಾವಪ್ಪಿದ ಬಗ್ಗೆ ವೈದ್ಯರು ಘೋಷಿಸಿದರು.