ಯಲ್ಲಾಪುರದ ಸಾತೊಡ್ಡಿ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಸೋಮವಾರ ಪುಂಡಾಟ ಮಾಡಿದ್ದ ಪಡ್ಡೆ ಹುಡುಗರನ್ನು ಪೊಲೀಸರು ಹಿಡಿದಿದ್ದಾರೆ. ರಸ್ತೆ ಮೇಲೆ ಅಡ್ಡಾದಿಡ್ಡಿ ಬೈಕ್ ಓಡಿಸಿ, ಡಾನ್ಸ್ ಮಾಡಿದವರನ್ನು ಪೊಲೀಸ್ ಠಾಣೆಗೆ ಕರೆತಂದು ಕಾನೂನು ಪಾಠ ಮಾಡಿದ್ದಾರೆ.
ಸೋಮವಾರ ಮಧ್ಯಾಹ್ನ ಯಲ್ಲಾಪುರದ ಸಾತೊಡ್ಡಿ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಹುಬ್ಬಳ್ಳಿಯ ಹುಡುಗರು ಪುಂಡಾಟ ಮೆರೆದಿದ್ದರು. ನೋಂದಣಿ ಸಂಖ್ಯೆ ಸಹ ಇಲ್ಲದ ಬೈಕುಗಳಲ್ಲಿ ಬಂದ ಕಾಲೇಜು ಹುಡುಗರು ಅಡ್ಡಾದಿಡ್ಡಿ ಬೈಕ್ ಓಡಿಸಿ ಇನ್ನಿತರರಿಗೆ ಸಮಸ್ಯೆ ಮಾಡಿದ್ದರು. ಬೈಕ್ ಚಲಿಸುವಾಗಲೇ ದೊಡ್ಡದಾಗಿ ಹಾಡು ಹಾಕಿ ಬೈಕ್ ಮೇಲೆ ನಿಂತು ಡಾನ್ಸ್ ಮಾಡುತ್ತಿದ್ದರು. ಒಟ್ಟು ನಾಲ್ಕು ಬೈಕಿನಲ್ಲಿ ಏಳು ಜನರಿದ್ದು, ಅವರ ವರ್ತನೆ ವಿರುದ್ಧ ಜನ ಆಕ್ರೋಶವ್ಯಕ್ತಪಡಿಸಿದ್ದರು. `ಜನಸ್ನೇಹಿ ಪೊಲೀಸ್’ ವಾಟ್ಸಪ್ ಗುಂಪಿನಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದ್ದು, ಪಡ್ಡೆ ಹುಡುಗರ ಫೋಟೋವನ್ನು ವ್ಯಕ್ತಿಯೊಬ್ಬರು ಹಂಚಿಕೊoಡಿದ್ದರು.
ಈ ವಿಷಯ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ತಲುಪಿದ್ದು, ಅಲ್ಲಿನ ಸೂಚನೆ ಮೇರೆಗೆ ಯಲ್ಲಾಪುರ ಪಿಸೈ ರಾಜಶೇಖರ ವಂದಲಿ ಅವರು ಸಾತೊಡ್ಡಿ ಜಲಪಾತಕ್ಕೆ ಭೇಟಿ ನೀಡಿದರು. ಲಭ್ಯ ದಾಖಲೆಗಳ ಆಧಾರದಲ್ಲಿ ಆ ಪುಂಡರನ್ನು ವಿಚಾರಣೆಗೆ ಒಳಪಡಿಸಿದರು. ಅವರೆಲ್ಲರನ್ನು ಯಲ್ಲಾಪುರ ಪೊಲೀಸ್ ಠಾಣೆಗೆ ಕರೆದೊಯ್ದು ಕಾನೂನು ಪಾಠ ಮಾಡಿದರು. ಈ ವೇಳೆ ಪೊಲೀಸರಿಗೆ ಪ್ರಭಾವಿ ರಾಜಕಾರಣಿಯೊಬ್ಬರ ಫೋನ್ ಬಂದಿದ್ದು, ಅದಕ್ಕೆ ಮಣಿಯದ ಪೊಲೀಸರು ಪ್ರತಿ ಬೈಕಿಗೂ 2 ಸಾವಿರ ರೂಪಾಯಿಗಳ ಹಾಗೇ ಒಟ್ಟು 8 ಸಾವಿರ ರೂ ದಂಡ ವಿಧಿಸಿದರು. ಆ ಏಳು ಜನ ಹುಡುಗರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನು ನೀಡಿದರು.