ಉತ್ತರ ಕನ್ನಡ ಜಿಲ್ಲಾಕೇಂದ್ರ ಕಾರವಾರದಲ್ಲಿರುವ ಜಿಲ್ಲಾ ಆಸ್ಪತ್ರೆಯನ್ನು ಶಿರಸಿಗೆ ಸ್ಥಳಾಂತರಿಸಲು ಸರ್ಕಾರ ಕಸರತ್ತು ನಡೆಸಿದೆ. ಇದನ್ನು ವಿರೋಧಿಸಿ ಕಾರವಾರದ ಜನ ಉಗ್ರ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ವಿವಿಧ ಸಂಘಟನೆ ಪ್ರಮುಖರು ಈ ದಿನ ದಿಢೀರ್ ಸುದ್ದಿಗೋಷ್ಠಿ ನಡೆಸಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಸ್ಪತ್ರೆ ಅವ್ಯವಸ್ಥೆ ಹಾಗೂ ನಿರ್ದೇಶಕರ ವರ್ತನೆ ವಿರುದ್ಧ ಕಿಡಿಕಾರುತ್ತಿದ್ದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಈ ಉಗ್ರ ಹೋರಾಟದ ರೂವಾರಿ. ಅವರ ಜೊತೆ ಪ್ರಮುಖರಾದ ರಾಮಾ ನಾಯ್ಕ, ಅಬ್ಬಾಸ್, ಕೆ ಡಿ. ಪೇಡ್ನೇಕರ, ರಾಜೇಂದ್ರ ಅಂಚೇಕರ, ಗೋಪಾಲಕೃಷ್ಣ ನಾಯಕ, ಸೂರಜ್ ಕುರುಮಕರ್, ಅಲ್ತಾಪ್ ಶೇಖ್ ಸೇರಿ ಹೋರಾಟದ ರೂಪರೇಷೆಯ ಬಗ್ಗೆ ಚರ್ಚಿಸಿದ್ದಾರೆ. `ಜಿಲ್ಲಾಸ್ಪತ್ರೆಯನ್ನು ಕಾರವಾರದಿಂದ ಶಿರಸಿಗೆ ಸ್ಥಳಾಂತರಿಸುವ ಯಾವುದೇ ಪ್ರಯತ್ನ ಫಲ ಕೊಡಲು ಬಿಡುವುದಿಲ್ಲ’ ಎಂದು ಅವರೆಲ್ಲರೂ ಸೇರಿ ಎಚ್ಚರಿಸಿದ್ದಾರೆ. ತಮ್ಮ ಎಚ್ಚರಿಕೆಯನ್ನು ಮೀರಿ ಸ್ಥಳಾಂತರ ಪ್ರಯತ್ನ ನಡೆದರೆ ಸಾರ್ವಜನಿಕರ ಜೊತೆಗೂಡಿ ಹೋರಾಟ ನಡೆಸುವುದಾಗಿ ಮತ್ತೊಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಗುರುವಾರ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದ್ದು, ಜಿಲ್ಲಾಸ್ಪತ್ರೆಯ ಆಗು-ಹೋಗುಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. `2014ರಲ್ಲಿ ಕಾರವಾರದಲ್ಲಿ ಕ್ರಿಮ್ಸ್ ಸ್ಥಾಪನೆಯಾದ ಬಳಿಕ ಜಿಲ್ಲಾಸ್ಪತ್ರೆ ಅದರಲ್ಲಿ ವಿಲೀನಗೊಂಡಿದ್ದು, ಕ್ರಿಮ್ಸ್ ಮೇಲ್ದರ್ಜೆಗೆ ಹೋಗುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಸಿಗಬೇಕಾದ ಅನೇಕ ಸೌಲಭ್ಯಗಳು ತಪ್ಪಿಹೋಗಿವೆ. ಬಿಪಿಎಲ್ ಕಾರ್ಡುದಾರರಿಂದ ಒಪಿಡಿಯಲ್ಲಿ ಶೇ 50ರಷ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ವಿವಿಧ ತಪಾಸಣೆಗಳಿಗೆ ಸಾವಿರಾರು ರೂಪಾಯಿ ಬಿಲ್ ಆಗುತ್ತಿದ್ದು, ದಾಖಲಾತಿ ಬಳಿಕ ಉಚಿತವೆಂದರೂ ಆಯುಷ್ಮಾನ್ ಯೋಜನೆಯ ಮೊತ್ತದಿಂದ ಹೊಂದಿಸಿಕೊಳ್ಳಲಾಗುತ್ತಿದೆ’ ಎಂಬ ವಿಷಯದ ಬಗ್ಗೆ ಎಲ್ಲರೂ ಆಕ್ರೋಶದಿಂದ ಮಾತನಾಡಿದ್ದಾರೆ. `ಜಿಲ್ಲಾಸ್ಪತ್ರೆ ಇದ್ದಿದ್ದರೆ ಈ ಎಲ್ಲ ಸೌಲಭ್ಯಗಳು ಉಚಿತವಾಗಿ ಸಿಗುತ್ತಿತ್ತು’ ಎಂಬ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
`ಕಾರವಾರದಲ್ಲಿ ಜಿಲ್ಲಾಸ್ಪತ್ರೆ ಇಲ್ಲದ ಕಾರಣ ಇಲ್ಲಿ ಬರಬೇಕಿದ್ದ ಎಂಆರ್ಐ ಯಂತ್ರ ಉಡುಪಿ ಜಿಲ್ಲಾಸ್ಪತ್ರೆಗೆ ತೆರಳಿದೆ. ಇದರಿಂದ ಜಿಲ್ಲೆಯ ಜನರು ಉಚಿತ ಎಂಆರ್ಐ ಸೌಲಭ್ಯಕ್ಕಾಗಿ ಉಡುಪಿ ಹಾಗೂ ಮಂಗಳೂರು ಅವಲಂಬಿಸಬೇಕಾಗಿದೆ. ಅಂಕೋಲಾ ಸಮೀಪದ ಹಟ್ಟಿಕೇರಿಯಲ್ಲಿ ಆರೋಗ್ಯ ಇಲಾಖೆಗೆ ಸೇರಿದ ಸುಮಾರು 18 ಎಕರೆ ಜಾಗವಿದ್ದು, ಬಂದರು, ಹೆದ್ದಾರಿ ಹಾಗೂ ಉದ್ದೇಶಿತ ವಿಮಾನ ನಿಲ್ದಾಣ ಸಮೀಪ ಇರುವುದರಿಂದ ಅಲ್ಲಿ ಜಿಲ್ಲಾಸ್ಪತ್ರೆ, ಕ್ಯಾಥ್ ಸೆಂಟರ್ ಹಾಗೂ ಟ್ರಾಮಾ ಕೇರ್ ಕೇಂದ್ರ ಸ್ಥಾಪನೆಗೆ ಅನುಕೂಲಕರವಾಗಿದೆ’ ಎಂದವರು ಹೇಳಿದ್ದಾರೆ. `ಕಾರವಾರ ತಾಲೂಕಿಗೆ ತಾಲೂಕು ಆಸ್ಪತ್ರೆಯೇ ಇಲ್ಲ. ಅಂಗಡಿಯಲ್ಲಿ ಈಗಾಗಲೇ ಸುಸಜ್ಜಿತ ಆಸ್ಪತ್ರೆ ಕಟ್ಟಡವಿದ್ದು ಅದನ್ನು ತಾಲೂಕು ಆಸ್ಪತ್ರೆಗೆ ಬಳಸಬಹುದು. ಹಳೆಯ ಜಿಲ್ಲಾಸ್ಪತ್ರೆ ಹಾಗೂ ಆಯುಷ್ ಇಲಾಖೆಯ ಜಾಗವನ್ನೂ ಉಪಯೋಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
`ಕ್ರಿಮ್ಸ್ ನಿರ್ದೇಶಕರಿಗೆ ಅನುಭವದ ಕೊರತೆ ಇರುವುದರಿಂದ ಅಭಿವೃದ್ಧಿಗೆ ಕುಂಟಿತ ಉಂಟಾಗಿದೆ. ಇಲ್ಲಿ ಬರಲು ವೈದ್ಯರು ಒಪ್ಪುತ್ತಿಲ್ಲ, ಈಗ ಕೆಲಸ ಮಾಡುತ್ತಿದ್ದವರೂ ಬೇರೆ ಕಡೆ ತೆರಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಆರೋಗ್ಯ ಸಚಿವರು ಕಾರವಾರ ಭೇಟಿ ವೇಳೆ ಜಿಲ್ಲಾಸ್ಪತ್ರೆಯನ್ನು ಶಿರಸಿಗೆ ಸ್ಥಳಾಂತರಿಸುವ ಪ್ರಸ್ತಾಪ ಮಾಡಿದ್ದು ಸರಿಯಲ್ಲ’ ಎಂದಿದ್ದಾರೆ. `ಶಿರಸಿ ಉತ್ತರ ಕನ್ನಡ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದು, ಅಲ್ಲಿ ಆಸ್ಪತ್ರೆ ಸ್ಥಾಪನೆಗೆ ವಿರೋಧ ಇಲ್ಲ. ಆದರೆ ಕಾರವಾರದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಶಿರಸಿಗೆ ಸ್ಥಳಾಂತರಿಸುವುದನ್ನು ಒಪ್ಪುವುದಿಲ್ಲ’ ಎಂದು ಎಲ್ಲರೂ ಒಗ್ಗಟ್ಟಿನಿಂದ ಹೇಳಿದ್ದಾರೆ.