ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ವಿ ಎಸ್ ಪಾಟೀಲ್ ಅವರು ಆಯ್ಕೆಯಾಗಿದ್ದು, ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಓಡಾಡುತ್ತಿದ್ದಾರೆ. ಸಂಘಟನೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರು ವಿ ಎಸ್ ಪಾಟೀಲ್ ಅವರಿಗೆ ಬೆನ್ನೆಲುಬಾಗಿದ್ದಾರೆ.
ಸಮುದಾಯ ಸಂಘಟನೆಯ ಮೊದಲ ಹಂತವಾಗಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಜೂನ್ 6ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವೂ ನಡೆಯಲಿದೆ. ಇದೇ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ. ಸಂಘಟನೆಯ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ್, ರಾಜ್ಯಾಧ್ಯಕ್ಷ ಶಂಕರ ಬಿದರಿ ಹಾಗೂ ಮಹಾಸಭಾದ ವಿವಿಧ ಸ್ಥರಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಶುಕ್ರವಾರ ವಿ ಎಸ್ ಪಾಟೀಲ್ ಅವರು ಈ ವಿಷಯವನ್ನು ಸುದ್ದಿಗಾರರ ಬಳಿ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದವರಿದ್ದು, ಅವರೆಲ್ಲರಿಗೂ ಈ ಕಾರ್ಯಕ್ರಮಕ್ಕೆ ವಿ ಎಸ್ ಪಾಟೀಲ್ ಅವರು ಆಮಂತ್ರಿಸಿದ್ದಾರೆ. `ಸದ್ಯ 1300 ಸದಸ್ಯರ ಸಮಿತಿ ರಚಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷದವರು ಈ ಸಮಿತಿಯಲ್ಲಿದ್ದು, ಭವಿಷ್ಯದಲ್ಲಿ ಸಂಘಟನೆಗೆ ಒತ್ತು ನೀಡಲಾಗುತ್ತದೆ. ಜೊತೆಗೆ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇವೆ’ ಎಂದು ಅವರು ಘೋಷಿಸಿದ್ದಾರೆ. `ಶೈಕ್ಷಣಿಕ ಹಾಗೂ ಆರ್ಥಿಕ ದುರ್ಬಲರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೆರವು ನೀಡಲಿದೆ’ ಎಂದವರು ಹೇಳಿದ್ದಾರೆ.
ಪ್ರಮುಖರಾದ ಜ್ಯೋತಿ ಪಾಟೀಲ, ರಾಜೇಶ ಹಂಚಿನಾಳಮಠ, ಸಂಗಪ್ಪ ಕೋಳೂರ, ಮಂಜುನಾಥ ಹಿರೇಮಠ, ಮಹೇಶ ದಾವಣಗೆರೆ, ಪ್ರಭಾವತಿ ಗೋವಿ ಈ ವೇಳೆ ಇದ್ದರು.