ಕಾನ್ಸರಿನಿಂದ ಬಳಲುತ್ತಿರುವ ಕುಮಟಾದ ಜನಾರ್ಧನ ಮುಕ್ರಿ (19) ಅವರು ಬೆಂಗಳೂರಿನ `ನಾರಾಯಣ ಹೆಲ್ತ್’ ದಾಖಲಾಗಿದ್ದಾರೆ. ಅದು-ಇದು ಚಿಕಿತ್ಸೆ ಎಂದು ಆಸ್ಪತ್ರೆಯವರು 3.30 ಲಕ್ಷ ರೂ ಬಿಲ್ ಮಾಡಿದ್ದು, ಆ ಹಣ ಪಾವತಿಸಲಾಗದೇ ಅವರು ಕೊರಗುತ್ತಿದ್ದಾರೆ.
ಕುಮಟಾದ ಹಳಕಾರ ಗ್ರಾಮದ ಮಾರು ಮುಕ್ರಿ ಅವರು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಅವರ ಮಗ ಜನಾರ್ಧನ ಮುಕ್ರಿ ಅವರು 7ನೆ ತರಗತಿಯಲ್ಲಿರುವಾಗ ಅನಾರೋಗ್ಯ ಕಾಡಿದ್ದು, ವೈದ್ಯರನ್ನು ಭೇಟಿ ಮಾಡಿದಾಗ ಕಾನ್ಸರ್ ಆವರಿಸಿರುವುದು ಗೊತ್ತಾಗಿದೆ. ವಿವಿಧ ಆಸ್ಪತ್ರೆಗಳಿಗೆ ಮಗನನ್ನು ಕರೆದೊಯ್ದ ಮಾರು ಮುಕ್ರಿ ಅವರು ಕೊನೆಗೆ ವಿಧಿ ಇಲ್ಲದೇ ನಾರಾಯಣ ಹೆಲ್ತಗೆ ಹೋಗಿದ್ದಾರೆ. ಅಲ್ಲಿನ ವೈದ್ಯರು ಜನಾರ್ಧನ ಮುಕ್ರಿ ಅವರಿಗೆ ವಿವಿಧ ಚಿಕಿತ್ಸೆ ನೀಡಿದರೂ ಅವರ ಆರೋಗ್ಯದಲ್ಲಿ ಮಾತ್ರ ಚೇತರಿಕೆ ಆಗಿಲ್ಲ.
ಈ ನಡುವೆ ಮಾರು ಮುಕ್ರಿ ಅವರಿಗೆ ಆಸ್ಪತ್ರೆಯವರು ಬಿಲ್ ಪಾವತಿಸುವಂತೆ ಸೂಚಿಸಿದ್ದಾರೆ. ಈಗಾಗಲೇ 7 ಲಕ್ಷ ರೂ ಸಾಲ ಮಾಡಿಕೊಂಡಿರುವ ಮಾರು ಮುಕ್ರಿ ಅವರು ಇದೀಗ ಆಸ್ಪತ್ರೆಯವರು ನೀಡಿದ 3.30 ಲಕ್ಷ ರೂ ಮೌಲ್ಯದ ಬಿಲ್ ನೋಡಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. 9 ದಿನದ ಆರೈಕೆಗೆ 3.30 ಲಕ್ಷ ರೂ ಪಾವತಿಸಬೇಕು ಎಂದು ಅರಿತು ಅವರು ಕಂಗಾಲಾಗಿದ್ದಾರೆ.
`ತಮ್ಮಲ್ಲಿ ಅಷ್ಟೊಂದು ಹಣ ಇಲ್ಲ’ ಎಂದು ಮಾರು ಮುಕ್ರಿ ಅವರು ಆಸ್ಪತ್ರೆಯವರಲ್ಲಿ ಹೇಳಿದ್ದು, `ಬಿಲ್ ಪಾವತಿಸದೇ ರೋಗಿಯನ್ನು ಬಿಡುವುದಿಲ್ಲ’ ಎಂದು ಅಲ್ಲಿನವರು ಹೇಳಿದ್ದಾರೆ. ಮಗನನ್ನು ಆಸ್ಪತ್ರೆಯಿಂದ ಬಿಡಿಸಿಕೊಳ್ಳಲಾಗದೇ ಅವರು ಕುಮಟಾಗೆ ಮರಳಿದ್ದು, ನೆರವಿಗಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಬಾಗಿಲು ಬಡಿದಿದ್ದಾರೆ. ಈ ಹಿಂದೆ ಸಹ ಮಾರು ಮುಕ್ರಿ ಅವರು ಮಂಗಳೂರಿನ ಆಸ್ಪತ್ರೆಗೆ ಮಗನನ್ನು ದಾಖಲಿಸಿದ್ದರು. ಆ ವೇಳೆಯಲ್ಲಿಯೂ ಅವರು ನೆರವಿಗಾಗಿ ಮುಖ್ಯಮಂತ್ರಿ ಕಚೇರಿಯ ಮೊರೆ ಹೋಗಿದ್ದರು. ಆದರೆ, ಅಲ್ಲಿಂದ ಯಾವುದೇ ಸಹಾಯ ಸಿಕ್ಕಿರಲಿಲ್ಲ.
ಸದ್ಯ ಆಸ್ಪತ್ರೆ ವಿವರ, ಬಿಲ್ ದಾಖಲೆ ಗಮನಿಸಿದ ಆಗ್ನೇಲ್ ರೋಡ್ರಿಗಸ್ ಅವರು ಬುಧವಾರ ಮುಖ್ಯಮಂತ್ರಿ ಕಚೇರಿಗೆ ಫೋನ್ ಮಾಡಿದರು. ಬಡ ಕುಟುಂಬದ ಪರಿಸ್ಥಿತಿ ವಿವರಿಸಿ ಮುಖ್ಯಮಂತ್ರಿ ಪರಿಹಾರ ನಿಧಿ ಅಡಿ ನೆರವು ನೀಡುವಂತೆ ಕೋರಿದರು. ಮುಖ್ಯಮಂತ್ರಿ ಪರಿಹಾರ ನಿಧಿ ವಿಭಾಗದಲ್ಲಿ ಕೆಲಸ ಮಾಡುವುದಾಗಿ ಪರಿಚಯಿಸಿಕೊಂಡ ಕರ್ಕಿಯ ವಿನೋದ ಅವರು ದಾಖಲೆಗಳನ್ನು ಪರಿಶೀಲಿಸಿ ಸಹಾಯ ಮಾಡುವ ಬಗ್ಗೆ ಮಾತನಾಡಿದರು. ಇದಕ್ಕಾಗಿ ರೋಗಿಯ ಆಧಾರ್, ಪಡಿತರ ಹಾಗೂ ಆಸ್ಪತ್ರೆಯ ದಾಖಲೆಗಳನ್ನು ತರಿಸಿಕೊಂಡರು.