ಯಲ್ಲಾಪುರ-ಅಂಕೋಲಾ ಗಡಿಭಾಗದ ಕೆಳಾಸೆ ಕಾಡಿನ ಅಂಚಿನಲ್ಲಿರುವ ಕೈಗಡಿ ಹೊಳೆಯಲ್ಲಿ ಮುಳುಗಿದ ಉದ್ಯಮನಗರದ ಸಾಗರ ದೇವಾಡಿಗ ಅವರು ಈವರೆಗೂ ಸಿಕ್ಕಿಲ್ಲ.
ಮಂಗಳವಾರ ಸಂಜೆ ಸಾಗರ ದೇವಾಡಿಗ ಅವರು ಸ್ನೇಹಿತರ ಜೊತೆ ಕಾಡಿಗೆ ಹೋಗಿದ್ದರು. ಗಂಗಾವಳಿ ನದಿ ಅಂಚಿನಲ್ಲಿ ಅವರು ಬರ್ತಡೆ ಪಾರ್ಟಿ ಮಾಡಿದ್ದರು. ದಿನೇಶ, ಪುನಿತ್, ವಿನೋದ ಅವರ ಜೊತೆ ಸಾಗರ ಅವರು ಆನಂದದ ಕ್ಷಣ ಕಳೆದಿದ್ದರು. ಅದಾದ ನಂತರ ಸಾಗರ ದೇವಾಡಿಗ ಅವರು ನದಿ ಅಂಚಿಗೆ ಹೋಗಿದ್ದು, ಕಾಲು ಜಾರಿ ನೀರಿಗೆ ಬಿದ್ದರು.
ಸಾಗರ ದೇವಾಡಿಗ ಅವರು ನೀರಿನಲ್ಲಿ ಮುಳುಗುತ್ತಿರುವುದನ್ನು ಅವರ ಸ್ನೇಹಿತರು ನೋಡಿದರು. ಆದರೆ, ಸಾಗರ್ ದೇವಾಡಿಗ ನೀರಿನಿಂದ ಮುಂದೆ ಸಾಗಿದ್ದು ಕಾಣಲಿಲ್ಲ. ಮೇಲೆ ಬಂದಿದ್ದು ಅರಿವಾಗಲಿಲ್ಲ. ಮಂಗಳವಾರ ರಾತ್ರಿಯಿಡೀ ಅಲ್ಲಿ ಕಾರ್ಯಾಚರಣೆ ನಡೆದಿದ್ದು, ಬುಧವಾರ ಸಹ ಹುಡುಕಾಟ ಮುಂದುವರೆಯಿತು. ಬುಧವಾರ ಸಂಜೆಯವರೆಗೆ ನದಿ ಆಳದಲ್ಲಿ ಶೋಧ ನಡೆದರೂ ಸಾಗರ ದೇವಾಡಿಗ ಅವರು ಸಿಗಲಿಲ್ಲ.
ಸದ್ಯ ಸ್ಥಳೀಯರ ಜೊತೆ ಯಲ್ಲಾಪುರ-ಅಂಕೋಲಾ ಪೊಲೀಸರು ಸಾಗರ ದೇವಾಡಿಗ ಅವರ ಹುಡುಕಾಟ ನಡೆಸಿದ್ದಾರೆ. ಸ್ಥಳೀಯ ಸಿದ್ದಿ ಸಮುದಾಯದವರು ರಾತ್ರಿಯೂ ಅಲ್ಲಿಯೇ ಇದ್ದು ಶೋಧ ನಡೆಸುತ್ತಿದ್ದಾರೆ.