ದಾಂಡೇಲಿಯ ಡಿಲೆವರಿ ಬಾಯ್ ಅಬ್ಬಾಸ್‌ಅಲಿ ಹುಲಕೇರಿ ಅವರಿಗೆ ಮೂವರು ಥಳಿಸಿದ್ದಾರೆ. ಈ ಹೊಡೆದಾಟ ತಪ್ಪಿಸಲು ಬಂದ ಮಹಿಳೆಯರಿಬ್ಬರು ಪೆಟ್ಟು ತಿಂದಿದ್ದಾರೆ.
ದಾoಡೇಲಿ ಗಾಂಧಿನಗರ ಬಳಿಯ ಮಾರುತಿನಗರದ ಆಶ್ರಯ ಕಾಲೋನಿಯಲ್ಲಿ ಅಬ್ಬಾಸ್‌ಅಲಿ ಹುಲಕೇರಿ ಅವರು ವಾಸವಾಗಿದ್ದಾರೆ. ಡಿಲೆವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಅವರು ಅಕ್ಟೊಬರ್ 1ರಂದು ದಾಂಡಿಯಾ ನೋಡಲು ಹೋಗಿದ್ದರು. ಅಲ್ಲಿ ದಾಂಡೇಲಿಯ ಆಶಿಪ್ ನರಗುಂದ, ಗಾಂಧಿನಗರದ ಸಮೀರ ಕುಟ್ಟಿ ಹಾಗೂ ಜಮೀರ್ ಸಹ ಆಗಮಿಸಿದ್ದರು. ಅವರೆಲ್ಲರೂ ಕುಡಿದು ಗಲಾಟೆ ಮಾಡಿದ್ದರು. ಈ ವೇಳೆ ಅಬ್ಬಾಸ್‌ಅಲಿ ಹುಲಕೇರಿ ಹಾಗೂ ಆ ಮೂವರ ನಡುವೆ ಜಗಳ ಶುರುವಾಗಿತ್ತು.
ದಾಂಡಿಯಾ ಅವಧಿಯಲ್ಲಿ ಜಗಳ ಮಾಡುವುದು ಬೇಡ ಎಂದು ಅಬ್ಬಾಸ್‌ಅಲಿ ಎಲ್ಲವನ್ನು ಸಹಿಸಿಕೊಂಡಿದ್ದರು. ಆದರೆ, ಆಶಿಪ್ ನರಗುಂದ, ಸಮೀರ ಕುಟ್ಟಿ ಹಾಗೂ ಜಮೀರ್ ಆ ದಿನ ಆದ ಅವಮಾನವನ್ನು ಮರೆತಿರಲಿಲ್ಲ. ಅಕ್ಟೊಬರ್ 5ರಂದು ರಾತ್ರಿ 12ಗಂಟೆ ಆಸುಪಾಸಿಗೆ ಅಬ್ಬಾಸ್‌ಅಲಿ ಹುಲಕೇರಿ ಅವರು ತಮ್ಮ ದೊಡ್ಡಮ್ಮನ ಮನೆಗೆ ಹೋಗಿದ್ದರು. ಅಲ್ಲಿಗೆ ಬಂದ ಆಶಿಪ್ ನರಗುಂದ, ಸಮೀರ ಕುಟ್ಟಿ ಹಾಗೂ ಜಮೀರ್ ಗಲಾಟೆ ಶುರು ಮಾಡಿದರು.
ಅಬ್ಬಾಸ್‌ಅಲಿ ಹುಲಕೇರಿ ಅವರ ತಾಯಿಗೆ ಕೆಟ್ಟದಾಗಿ ಬೈದು ಅಬ್ಬಾಸ್‌ಅಲಿ ಹುಲಕೇರಿ ಅವರಿಗೆ ಕಟ್ಟಿಗೆಯಿಂದ ಹೊಡೆದರು. ಅಬ್ಬಾಸ್‌ಅಲಿ ಹುಲಕೇರಿ ಅವರ ದೊಡ್ಡಮ್ಮ ಪಾತಿಮಾ ಹಾಗೂ ಅಕ್ಕನ ಮಗಳು ಸಾನಿಯಾ ಕುಟ್ಟಿ ಈ ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದರು. ಆಗ, ಜಲಾಲ ಕುಟ್ಟಿ ಅವರು ಪಾತಿಮಾ ಅವರ ಮೇಲೆಯೂ ಕೈ ಮಾಡಿದರು. ಸಾನಿಯಾ ಅವರ ಕಪಾಳಕ್ಕೆ ಬಾರಿಸಿದರು.
ಆ ಮೂವರು ಸೇರಿ ಸಾನಿಯಾ ಅವರ ಬೆನ್ನು, ಹೊಟ್ಟೆಗೆ ತುಳಿದು ನೋವು ಮಾಡಿದರು. ಅದಾದ ನಂತರ ಅಬ್ಬಾಸ್‌ಅಲಿ ಅವರು ಆಸ್ಪತ್ರೆ ಸೇರಿದ್ದು, ಚಿಕಿತ್ಸೆಪಡೆದು ಪೊಲೀಸ್ ದೂರು ನೀಡಿದರು. ದಾಂಡೇಲಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.