ಯಲ್ಲಾಪುರದ ಲಕ್ಷ್ಮೀ ಸಿದ್ದಿ ಅವರ ಮನೆ ಬಳಿ ಸುಳಿದಾಡುತ್ತಿದ್ದ ಮಂಜುನಾಥ ಸಿದ್ದಿ ಅವರು ಲಕ್ಷ್ಮೀ ಸಿದ್ದಿ ಅಡಿಕೆ ತೋಟದ ಬಳಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ದುಡುಕು ನಿರ್ಧಾರಕ್ಕೆ ಕಾರಣ ಗೊತ್ತಾಗಿಲ್ಲ.
ಯಲ್ಲಾಪುರದ ಉಮ್ಮಚ್ಗಿ ಬಳಿಯ ಮಾವಿನಕಟ್ಟಾದ ಮಂಜುನಾಥ ಸುಬ್ರಹ್ಮಣ್ಯ ಸಿದ್ದಿ (30) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಸರಾಯಿ ಕುಡಿಯುವ ಚಟಕ್ಕೆ ಅವರು ಅಂಟಿಕೊAಡಿದ್ದರು. ಆಗಾಗ ಭರಣಿ ಗ್ರಾಮದ ಲಕ್ಷ್ಮೀ ಸಿದ್ದಿ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಹೀಗಿರುವಾಗ ಅಕ್ಟೊಬರ್ 7ರಂದು ಸಹ ಅವರು ಲಕ್ಷ್ಮೀ ಸಿದ್ದಿ ಅವರ ಮನೆ ಬಳಿ ಸುಳಿದಾಡಿದ್ದರು.
ಮಧ್ಯಾಹ್ನದ ಅವಧಿಯಲ್ಲಿ ಲಕ್ಷ್ಮೀ ಸಿದ್ದಿ ಅವರ ತೋಟಕ್ಕೆ ಹೋದ ಮಂಜುನಾಥ ಸಿದ್ದಿ ಅವರು ಅಲ್ಲಿಯೇ ಆತ್ಮಹತ್ಯೆಗೆ ಶರಣಾದರು. ಅಲ್ಲಿರುವ ಅಡಿಕೆ ತೋಟದ ಅಂಚಿನಲ್ಲಿದ್ದ ಕಾಡು ಮರಕ್ಕೆ ಮಂಜುನಾಥ ಸಿದ್ದಿ ಅವರು ನೇತಾಡುತ್ತಿದ್ದರು. ಸಂಜೆ ವೇಳೆ ಅವರ ಆತ್ಮಹತ್ಯೆಯ ವಿಷಯ ಗೊತ್ತಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಮಂಜುನಾಥ ಸಿದ್ದಿ ಅವರ ತಂದೆ ಸುಬ್ರಹ್ಮಣ್ಯ ಸಿದ್ದಿ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.