ಅಕ್ರಮ ಕಟ್ಟಡವನ್ನು ಸಕ್ರಮಗೊಳಿಸುವ ಒತ್ತಡಕ್ಕೆ ಮಣಿಯದ ಕುಮಟಾ ಪುರಸಭೆ ಕಂದಾಯ ನಿರೀಕ್ಷಕ ವೆಂಕಟೇಶ ಆರ್ ಅವರು ಮೊನ್ನೆ ನಾಪತ್ತೆಯಾಗಿದ್ದು, ಸದ್ಯ ಅವರು ಬೆಳಗಾವಿಯಲ್ಲಿ ಸುರಕ್ಷಿತವಾಗಿದ್ದಾರೆ.
ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ಹೆಸರು ಉಲ್ಲೇಖಿಸಿ ವೆಂಕಟೇಶ್ ಆರ್ ಅವರು ಪತ್ರ ಬರೆದಿದ್ದರು. ಕುಮಟಾ ರಾಷ್ಟಿಯ ಹೆದ್ದಾರಿ ಅಂಚಿನಲ್ಲಿರುವ ವಿನಾಯಕ ಹೊಟೇಲ್ ಅನಧಿಕೃತವಾಗಿದ್ದರೂ ಆ ಕಟ್ಟಡಕ್ಕೆ ಅಧಿಕೃತ ಮುದ್ರೆ ಒತ್ತುವಂತೆ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರು ಒತ್ತಡ ಹೇರಿದ ಬಗ್ಗೆ ವಿವರಿಸಿದ್ದರು. ಜೊತೆಗೆ ಮೇಲಧಿಕಾರಿಗಳ ಒತ್ತಡ, ಮಾನಸಿಕ ಹಿಂಸೆ ಹಾಗೂ ಜಾತಿ ನಿಂದನೆಯ ಬಗ್ಗೆ ಅವರು ಪತ್ರದಲ್ಲಿ ವಿವರವಾಗಿ ಬರೆದಿದ್ದರು. ಹಣಕಾಸು ವ್ಯವಹಾರದ ಬಗ್ಗೆಯೂ ಅವರು ಪತ್ರದಲ್ಲಿ ತಿಳಿಸಿದ್ದರು. ಅದಾದ ನಂತರ ವೆಂಕಟೇಶ್ ಆರ್ ಅವರು ಕಣ್ಮರೆಯಾಗಿದ್ದು, ಕುಟುಂಬದವರ ಜೊತೆ ಸಹದ್ಯೋಗಿಗಳಿಗೂ ಆತಂಕ ಶುರುವಾಗಿತ್ತು.
ಈ ಎಲ್ಲಾ ಹಿನ್ನಲೆ ವೆಂಕಟೇಶ ಆರ್ ಅವರ ತಾಯಿ ಆಶಾ ಹರಿಜನ ಅವರು ಮಗ ನಾಪತ್ತೆಯಾದ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಜೊತೆಗೆ ಕುಮಟಾ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರ ಅವರು ಎರಡು ತಿಂಗಳಿನಿAದ ಮಾನಸಿಕ ಹಿಂಸೆ ನೀಡಿದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಅರಿತ ವೆಂಕಟೇಶ್ ಆರ್ ಅವರು ತಾಯಿಗೆ ಫೋನ್ ಮಾಡಿದರು. `ತಾನು ಬೆಳಗಾವಿಗೆ ಬಂದಿದ್ದೇನೆ’ ಎಂದವರು ಮಾಹಿತಿ ನೀಡಿದರು. ಈ ಹಿನ್ನಲೆ ಪೊಲೀಸರು ಬೆಳಗಾವಿಗೆ ಹೋಗಿ ವೆಂಕಟೇಶ್ ಆರ್ ಅವರನ್ನು ಮನವೊಲೈಸಲು ಪ್ರಯತ್ನಿಸಿದರು.
ತಮಗಾದ ಹಿಂಸೆ, ಅವಮಾನದ ಬಗ್ಗೆ ವೆಂಕಟೇಶ್ ಆರ್ ಅವರು ಪೊಲೀಸರ ಬಳಿ ಹೇಳಿದ್ದು, ಅವರನ್ನು ಜಿಲ್ಲೆಗೆ ಕರೆತರುವ ಪ್ರಯತ್ನ ನಡೆದಿದೆ. ವೆಂಕಟೇಶ್ ಆರ್ ಅವರು ಬರೆದ ಪತ್ರ ನೋಡಿದವರು ಅನಾಹುತ ನಡೆದ ಬಗ್ಗೆ ಅನುಮಾನವ್ಯಕ್ತಪಡಿಸಿದ್ದು, ಅವರೆಲ್ಲರೂ ಇದೀಗ ನಿರಾಳರಾಗಿದ್ದಾರೆ.