ಯಲ್ಲಾಪುರದಿಂದ ಕುಮಟಾಗೆ ಹೋಗುತ್ತಿದ್ದ ಡಸ್ಟರ್ ಕಾರು ಅರಬೈಲ್ ಘಟ್ಟದ ಬಳಿ ಬೆಂಕಿಗೆ ಆಹುತಿಯಾಗಿದೆ. ಸೋಮವಾರ ತಡರಾತ್ರಿ ಈ ಅನಾಹುತ ನಡೆದಿದೆ.
ಯಲ್ಲಾಪುರದ ಉದ್ಯಮನಗರ ಬಳಿಯ ರೂಪೇಶ ನಾಯ್ಕ ಅವರು ಸೋಮವಾರ ರಾತ್ರಿ ಹುಬ್ಬಳ್ಳಿ-ಅಂಕೋಲಾ ಹೆದ್ದಾರಿಯಲ್ಲಿ ಕಾರು ಓಡಿಸುತ್ತಿದ್ದರು. ಅವರ ಜೊತೆ ಅಕ್ಷಯ ನಾಯ್ಕ ಎಂಬಾತರು ಇದ್ದರು. ಆರತಿಬೈಲ್ ಘಟ್ಟದಲ್ಲಿ ಎದುರಿನಿಂದ ದಿಡೀರ್ ಆಗಿ ಇನ್ನೊಂದು ವಾಹನ ಬಂದಿದ್ದು, ರೂಪೇಶ ನಾಯ್ಕ ಅವರು ಅಪಘಾತ ತಪ್ಪಿಸುವುದಕ್ಕಾಗಿ ಕಾರನ್ನು ಏಕಾಏಕಿ ತಿರುಗಿಸಿದರು. ಶೇಡಿಕೇರೆ ತಿರುವಿನ ಬಳಿ ಕಾರು ಮುಂದಿದ್ದ ತಡೆಗೋಡೆಯ ಕಟ್ಟೆಗೆ ಡಿಕ್ಕಿಯಾಯಿತು.
ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಹೊಗೆ ಬರುತ್ತಿರುವುದನ್ನು ನೋಡಿದ ರೂಪೇಶ ನಾಯ್ಕ ಹಾಗೂ ಅಕ್ಷಯ ನಾಯ್ಕ ಕಾರಿನಿಂದ ಇಳಿದರು. ಏನಾಗಿದೆ? ಎಂದು ನೋಡುವಷ್ಟರಲ್ಲಿ ಬೆಂಕಿ ಆವರಿಸಿತು. ಕಾರಿಗೆ ಹೊತ್ತಿದ ಬೆಂಕಿ ಆರಿಸುವ ಪ್ರಯತ್ನ ಮಾಡಿದರೂ ಅದು ಫಲ ಕೊಡಲಿಲ್ಲ. ಹೀಗಾಗಿ ಅವರು ಅಗ್ನಿಶಾಮಕದಳಕ್ಕೆ ಫೋನ್ ಮಾಡಲು ಪ್ರಯತ್ನಿಸಿದರು. ಆದರೆ, ಅಲ್ಲಿ ಸರಿಯಾಗಿ ಮೊಬೈಲ್ ನೆಟ್‌ವರ್ಕ ಸಿಗಲಲ್ಲ.
ಅದಾಗಿಯೂ, ನೆಟ್‌ವರ್ಕ ಹುಡುಕಿ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಪೊಲೀಸರಿಗೂ ವಿಷಯ ಮುಟ್ಟಿಸಿದರು. ಪಿಎಸ್‌ಐ ಸಿದ್ದು ಗುಡಿ ಅವರು ಅಗ್ನಿಶಾಮಕ ಸಿಬ್ಬಂದಿ ಜೊತೆ ಸ್ಥಳಕ್ಕೆ ತೆರಳಿದರು. ಹೊತ್ತಿ ಉರಿಯುತ್ತಿದ್ದ ಕಾರಿಗೆ ಅಗ್ನಿಶಾಮಕ ಸಿಬ್ಬಂದಿ ನೀರು ಹಾಯಿಸಿದರು. ರಾತ್ರಿ ಆಗಿದ್ದರಿಂದ ವಾಹನ ಸಂಚಾರ ಹೆಚ್ಚಿರಲಿಲ್ಲ. ಆದರೂ, ಕಾರಿನ ಬೆಂಕಿ ಇನ್ನಿತರ ಕಡೆ ವ್ಯಾಪಿಸುವ ಅಪಾಯವಿದ್ದು ಅದನ್ನು ಅಗ್ನಿಶಾಮಕ ಸಿಬ್ಬಂದಿ ತಡೆದರು.
ಕಾರಿನಲ್ಲಿದ್ದ ರೂಪೇಶ ನಾಯ್ಕ ಹಾಗೂ ಅಕ್ಷಯ ನಾಯ್ಕ ಮೊದಲೇ ಕೆಳಗಿಳಿದಿದ್ದರಿಂದ ಅಪಾಯದಿಂದ ಪಾರಾದರು. ಆದರೆ, ಅವರ ಕೆಲ ದಾಖಲೆಗಳು ಕಾರಿನ ಒಳಗೆ ಸಿಲುಕಿ ಸುಟ್ಟು ಹೋಗಿದ್ದವು. ಕಾರು ಗೋಡೆಗೆ ಗುದ್ದಿದಾಗ ರೇಡಿಯೇಟರ್ ಸಮಸ್ಯೆಯಿಂದ ಬೆಂಕಿ ಕಾಣಿಸಿದ ಅನುಮಾನವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆಯೂ ಅರಬೈಲ್ ಘಟ್ಟದಲ್ಲಿ ಆಲ್ಟೋ ಕಾರು ಅಗ್ನಿಗೆ ಆಹುತಿಯಾಗಿತ್ತು. ಆ ಸ್ಥಳದಿಂದ ಅನತಿ ದೂರದಲ್ಲಿಯೇ ಇದೀಗ ಡಸ್ಟರ್ ಕಾರು ಕರಕಲಾಗಿದೆ.