ಮುಂಡಗೋಡದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ರವಿಚಂದ್ರ ಎಗೇನವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ದಿಢೀರ್ ದುಡುಕು ನಿರ್ಧಾರಕ್ಕೆ ಕಾರಣ ಏನು ಎಂದು ಕುಟುಂಬದವರಿಗೂ ಗೊತ್ತಾಗಲಿಲ್ಲ.
ಮುಂಡಗೋಡದ ಕೊಪ್ಪದಲ್ಲಿ ರವಿಚಂದ್ರ ಎಗೇನವರ್ (35) ಅವರು ವಾಸವಾಗಿದ್ದರು. ವೆಲ್ಡಿಂಗ್ ಕೆಲಸ ಮಾಡಿಕೊಂಡು ಅವರು ಜೀವನ ನಿರ್ವಹಣೆ ಮಾಡುತ್ತಿದ್ದರು. ದುಡಿದ ಹಣವನ್ನು ಅವರು ಸರಾಯಿ ಸೇವನೆಗೆ ಮೀಸಲಿಟ್ಟಿದ್ದು, ಈಚೆಗೆ ಅವರ ಕುಡಿತದ ಚಟ ವಿಪರೀತವಾಗಿತ್ತು.
ಕಳೆದ ಕೆಲ ದಿನಗಳಿಂದ ರವಿಚಂದ್ರ ಎಗೇನವರ್ ಅವರು ಬೇಸರದಲ್ಲಿದ್ದರು. ಆದರೆ, ಬೇಸರದ ಬಗ್ಗೆ ಯಾರಲ್ಲಿಯೂ ಬಾಯ್ಬಿಟ್ಟು ಹೇಳಿರಲಿಲ್ಲ. ಹೀಗಿರುವಾಗ ಸೆಪ್ಟೆಂಬರ್ 29ರಂದು ಅವರು ಹೆಗಲ ಮೇಲೆ ಟವಲ್ ಹಾಕಿಕೊಂಡು ಅಡುಗೆ ಮನೆಗೆ ಹೋಗಿದ್ದು, ಅಲ್ಲಿರುವ ಕಬ್ಬಿಣದ ಜಂತಿಗೆ ಉರುಳು ಹಾಕಿಕೊಂಡರು. ಟವಲ್ ಬಳಸಿ ನೇಣಿಗೆ ಶರಣಾದ ಅವರನ್ನು ಸೆಪ್ಟೆಂಬರ್ 30ರಂದು ಮನೆಯವರು ನೋಡಿದರು.
ಬೇಥಸ್ತಾ ಬ್ಯಾಂಕಿನಲ್ಲಿ ಕೆಲಸ ಮಾಡುವ ತಮ್ಮ ಉದಯಕುಮಾರ ಏಗೇನವರ್ ಅವರು ಅಣ್ಣನ ಸಾವಿನ ಬಗ್ಗೆ ಪೊಲೀಸರಿಗೆ ತಿಳಿಸಿದರು. ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದರು.