ಅಂಕೋಲಾದಿoದ ಹುಬ್ಬಳ್ಳಿ ಕಡೆ ಹೊರಟಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಾರು ಯಲ್ಲಾಪುರದಲ್ಲಿ ಹೊಂಡ ಹಾರಿದೆ. ಜೊತೆಗೆ ಆ ಕಾರಿನ ಚಕ್ರ ಅಲ್ಲಿಯೇ ಸ್ಪೋಟಗೊಂಡಿದೆ. ಪರಿಣಾಮ ಬಸವರಾಜ ಹೊರಟ್ಟಿ ಅವರು ಸಮಯಕ್ಕೆ ಸರಿಯಾಗಿ ಹುಬ್ಬಳ್ಳಿಗೆ ತೆರಳಲಾರದೇ ಸಮಸ್ಯೆ ಅನುಭವಿಸಿದರು.
ಬುಧವಾರ ರಾತ್ರಿ ಬಸವರಾಜ ಹೊರಟ್ಟಿ ಅವರು ಹೆದ್ದಾರಿ ಮೂಲಕ ಹುಬ್ಬಳ್ಳಿಗೆ ಹೋಗುತ್ತಿದ್ದರು. ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಹೊರಟ್ಟಿಯವರ ಕಾರು ಕೋಳಿಕೇರಿ ಹಾಗೂ ಮಾವಳ್ಳಿ ಕ್ರಾಸ್ ನಡುವಿನ ಪ್ರದೇಶದಲ್ಲಿ ಹಾಳಾಯಿತು. ಅಲ್ಲಿ ಮೊಬೈಲ್ ನೆಟ್‌ವರ್ಕ ಸಹ ಸರಿಯಾಗಿ ಇರಲಿಲ್ಲ. ಅವರಿವರಿಗೆ ಫೋನ್ ಮಾಡಿದ ಬಸವರಾಜ ಹೊರಟ್ಟಿ ಅವರು ಕೊನೆಗೆ ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಅವರಿಗೆ ಫೋನ್ ಮಾಡಿದರು.
ಪ್ರಮೋದ ಹೆಗಡೆ ಅವರು ಸ್ಥಳಕ್ಕೆ ಬಂದು ತಮ್ಮ ಕಾರನ್ನು ಬಸವರಾಜ ಹೊರಟ್ಟಿ ಅವರಿಗೆ ಕೊಟ್ಟರು. ಪೊಲೀಸರೂ ಸ್ಥಳಕ್ಕೆ ಬಂದು ಬಸವರಾಜ ಹೊರಟ್ಟಿ ಅವರ ಕಾರಿಗೆ ಬೇರೆ ಟೈರ್ ಅಳವಡಿಸಲು ವ್ಯವಸ್ಥೆ ಮಾಡಿದರು. ಬಸವರಾಜ ಹೊರಟ್ಟಿ ಅವರ ಕಾರು ವೇಗವಾಗಿ ಚಲಿಸಿದರೂ ಚಾಲಕನ ಸಮಯ ಪ್ರಜ್ಞೆಯಿಂದ ಇನ್ನಷ್ಟು ದೊಡ್ಡ ಸಮಸ್ಯೆ ಆಗಲಿಲ್ಲ.
ರಾಜ್ಯದ ಎಲ್ಲಡೆ ರಸ್ತೆಗಳಲ್ಲಿ ಗುಂಡಿ ತುಂಬಿದ್ದು, ಇದಕ್ಕೆ ಯಲ್ಲಾಪುರ ಹೆದ್ದಾರಿ ಸಹ ಹೊರತಾಗಿಲ್ಲ. ನಿತ್ಯ ಇಲ್ಲಿ ಅನೇಕ ವಾಹನ ಹಾಳಾಗುತ್ತಿದ್ದು ಪ್ರಭಾವಿ ರಾಜಕಾರಣಿಯೂ ಆಗಿರುವ ಬಸವರಾಜ ಹೊರಟ್ಟಿ ಅವರೇ ಸಮಸ್ಯೆ ಅನುಭವಿಸಿದ್ದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿತು.