ಅಂಕೋಲಾದಲ್ಲಿ ಚಾಲಕರಾಗಿದ್ದ ಮಹಾಂತೇಶ ಮಕಮನಿ ಅವರು ಮಗಳ ಮೇಲೆ ಕೈ ಮಾಡಿದ್ದಾರೆ. ಮಗಳಿಗೆ ಹೊಡೆದ ನೋವು ತಾಳಲಾರದೇ ಅವರು ವಿಷ ಸೇವಿಸಿ ಸಾವನಪ್ಪಿದ್ದಾರೆ.
ಅಂಕೋಲಾದ ಬಾಳೆಗುಳಿಯಲ್ಲಿ ಮಹಾಂತೇಶ ಮಕಮನಿ (40) ಅವರು ವಾಸವಾಗಿದ್ದರು. ಚಾಲಕರಾಗಿ ಅವರು ಕೆಲಸ ಮಾಡಿಕೊಂಡಿದ್ದರು. ಮಹಾಂತೇಶ ಮಕಮನಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವೊಂದು ಬಾಕಿಯಿದ್ದು, ಸದಾ ಅದೇ ಗುಂಗಿನಲ್ಲಿರುತ್ತಿದ್ದರು. ಅಕ್ಟೊಬರ್ 3ರಂದು ಬೆಳಗ್ಗೆ ಅವರು ತಮ್ಮ ಜೊತೆಯಿದ್ದ ಮಗಳ ಮೇಲೆ ಕೈ ಮಾಡಿದರು. ಸಿಟ್ಟಿನಲ್ಲಿ ಮಗಳ ಮೇಲೆ ಕೈ ಮಾಡಿ ಗಲಾಟೆ ಮಾಡಿದರು.
ಅದಾದ ನಂತರ ಮಗಳಿಗೆ ಹೊಡೆದ ಕೊರಗು ಮಹಾಂತೇಶ ಮಕಮನಿ ಅವರನ್ನು ಕಾಡಿಸಲು ಶುರುವಾಯಿತು. ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳಲು ಸಾಧ್ಯವಾಗದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಬಾಳೆಗುಳಿಯ ಮನೆಯಲ್ಲಿ ತಂದಿರಿಸಿದ್ದ ಕ್ರಿಮಿನಾಶಕ ಸೇವಿಸಿದರು. ಇದನ್ನು ನೋಡಿದ ಕುಟುಂಬದವರು ತಕ್ಷಣ ಅವರನ್ನು ಅಂಕೋಲಾದ ಆಸ್ಪತ್ರೆಗೆ ಸಾಗಿಸಿದರು.
ಮಹಾಂತೇಶ ಮಕಮನಿ ಅವರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಅಂಕೋಲಾದಿoದ ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹುಬ್ಬಳ್ಳಿಯ ಕಿಮ್ಸ್’ಗೆ ಶಿಫಾರಸ್ಸು ಮಾಡಿದರು. ಕಿಮ್ಸ ಆಸ್ಪತ್ರೆಯಲ್ಲಿ ಮಹಾಂತೇಶ ಮಕಮನಿ ಅವರಿಗೆ ಚಿಕಿತ್ಸೆ ಮುಂದುವರೆದಿತ್ತು. ಆದರೆ, 14 ದಿನಗಳ ನಿರಂತರ ಚಿಕಿತ್ಸೆಯಿಂದ ಅವರು ಚೇತರಿಸಿಕೊಳ್ಳಲಿಲ್ಲ.
ಅಕ್ಟೊಬರ್ 22ರಂದು ಹುಬ್ಬಳ್ಳಿ ಆಸ್ಪತ್ರೆಯಲ್ಲಿಯೇ ಮಹಾಂತೇಶ ಮಕಮನಿ ಅವರು ಕೊನೆಯುಸಿರೆಳೆದರು. ಬಾಗಲಕೋಟೆಯ ಗುಳೆದಗಟ್ಟದಲ್ಲಿರುವ ಮಹಾಂತೇಶ ಮಕಮನಿ ಅವರ ತಂದೆ ನಾರಾಯಣ ಮಕಮನಿ ಅವರು ಮಗನ ಸಾವಿನ ಬಗ್ಗೆ ವಿಚಾರಿಸಿದರು. ಕೋರ್ಟ ಪ್ರಕರಣದ ಬೇಸರದಲ್ಲಿ ಅವರು ಮಗಳ ಮೇಲೆ ಕೈ ಮಾಡಿರುವ ವಿಚಾರ ತಿಳಿಯಿತು. ವಿಷ ಪ್ರಾಷನದಿಂದ ಮಗ ಸಾವನಪ್ಪಿರುವುದನ್ನು ಅರಿತ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು.