ಕುಮಟಾದ ಹಿರೇಗುತ್ತಿಯಲ್ಲಿನ ಪೊಲೀಸ್ ತಪಾಸಣಾ ಕೇಂದ್ರಕ್ಕೆ ಲಾರಿ ಗುದ್ದಿದ್ದು, ಈ ಅವಧಿಯಲ್ಲಿ ತಪಾಸಣಾ ಕೇಂದ್ರದಲ್ಲಿದ್ದ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಗುರುವಾರ ಅತ್ಯಂತ ವೇಗವಾಗಿ ಬಂದ ಲಾರಿ ಏಕಾಏಕಿ ಚೆಕ್‌ಪೋಸ್ಟ ಒಳಗೆ ನುಗ್ಗಿದೆ. ಅದಾದ ನಂತರ ಲಾರಿ ಹೆದ್ದಾರಿ ಮೇಲೆಯೇ ತಿರುಗಿ ಬಿದ್ದಿದೆ. ಲಾರಿ ಪಲ್ಟಿಯಾದ ಪರಿಣಾಮ ಅಲ್ಲಿ ಸಂಚಾರ ದಟ್ಟಣೆಯಾಗಿದ್ದು, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸುಧಾರಿಸಿಕೊಂಡು ಪರಿಸ್ಥಿತಿ ನಿಭಾಯಿಸಿದರು.
ಈ ಮೊದಲು ಹಿರೆಗುತ್ತಿಯಲ್ಲಿ ಉತ್ತಮ ಸಂಚಾರಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿತ್ತು. ಹೆದ್ದಾರಿ ಅಗಲೀಕರಣ ಕಾರಣದಿಂದ ಆ ಠಾಣೆಯನ್ನು ತೆರವು ಮಾಡಲಾಗಿದ್ದು, ತಾತ್ಕಾಲಿಕ ಶೆಡ್ಡಿನಲ್ಲಿ ಪೊಲೀಸರು ಆಶ್ರಯಪಡೆದಿದ್ದರು. ಚತುಷ್ಪದ ರಸ್ತೆ ಮಧ್ಯಭಾಗದಲ್ಲಿ ಆ ಶೆಡ್ ತಂದಿರಿಸಲಾಗಿತ್ತು. ಆ ಶೆಡ್ಡಿನೊಳಗೆ ಕುಳಿತು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದು, ಅದೇ ಶೆಡ್ಡಿಗೆ ಲಾರಿ ಗುದ್ದಿದೆ.
ಅಂಕೋಲಾದಿAದ ಕುಮಟಾ ಕಡೆ ಸಂಚರಿಸುತ್ತಿದ್ದ ಲಾರಿ ನಸುಕಿನ 1.30ಕ್ಕೆ ಪೊಲೀಸ್ ಕೇಂದ್ರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಸದ್ದಿಗೆ ಪೊಲೀಸರು ಅಲ್ಲಿಂದ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾರೆ. ಅದಾಗಿಯೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೋಕರ್ಣ ಪಿಐ ಶ್ರೀಧರ್ ಎಸ್ ಆರ್ ಸ್ಥಳದಲ್ಲಿದ್ದಾರೆ.
ಹೆದ್ದಾರಿ ಅಗಲೀಕರಣ ಮಾಡುತ್ತಿರುವ ಐ ಆರ್ ಬಿ ಕಂಪನಿಯ ಬೇಜವಬ್ದಾರಿಯಿಂದ ಈ ಅವಘಡ ನಡೆದ ಬಗ್ಗೆ ಜನ ದೂರಿದ್ದಾರೆ. ಅವಘಡ ತಡೆಗೆ ಸಾಕಷ್ಟು ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಜನ ಆಕ್ಷೇಪಿಸಿದ್ದಾರೆ. ಇಲ್ಲಿ ಶಾಶ್ವತ ಪೊಲೀಸ್ ಠಾಣೆ ನಿರ್ಮಿಸದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ.