ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದ ಮಂಜುನಾಥ ಭಟ್ಟ ಅವರು ಅದೇ ಬ್ಯಾಂಕಿಗೆ ಮೋಸ ಮಾಡಿದ್ದಾರೆ. ಜೊತೆಗೆ ಗ್ರಾಹಕರು ಠೇವಣಿಯಿರಿಸಿದ್ದ ಕೋಟ್ಯಾಂತರ ರೂಪಾಯಿಯನ್ನು ಅವರು ಕೊಳ್ಳೆಹೊಡೆದಿದ್ದಾರೆ!
Advertisement. Scroll to continue reading.
ಸಿದ್ದಾಪುರ ತಾಲೂಕಿನ ಹೆಗ್ಗರಣಿಯ ಮಂಜುನಾಥ ಶ್ರೀಧರ ಭಟ್ಟ ಅವರು 2013ರ ಅಗಸ್ಟ 5ರಂದು ಕರ್ನಾಟಕ ಬ್ಯಾಂಕ್ ಸೇರಿದರು. ಪ್ರೊಬಶನರಿ ಕ್ಲರ್ಕ ಆಗಿ ಕೆಲಸಕ್ಕೆ ಸೇರಿದ ಅವರು 2014ರ ಡಿಸೆಂಬರ್ 24ರಂದು ಪದೋನ್ನತಿಪಡೆದು ಚನ್ನಗಿರಿ ಶಾಖೆಗೆ ವರ್ಗವಾದರು. ಅದಾದ ನಂತರ 2023ರ ಜನವರಿ 20ರಂದು ಸಿದ್ದಾಪುರ ಶಾಖೆಗೆ ವರ್ಗವಾಗಿ ಬಂದರು. ಹಲಗೇರಿಯ ಅರಮನೆಯಲ್ಲಿ ವಾಸವಾಗಿರುವ ಅವರು ಕರ್ನಾಟಕ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಗ್ರಾಹಕ ಸೇವಾ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ ಭಟ್ಟ ಅವರು ಬ್ಯಾಂಕ್ ಖಾತೆ ಹೊಂದಿದ ಗ್ರಾಹಕರಿಗೆ ವಿವಿಧ ಸೇವೆ ಒದಗಿಸುವ ಮಹತ್ವದ ಹೊಣೆಗಾರಿಕೆಯನ್ನುವಹಿಸಿಕೊಂಡಿದ್ದರು. ಹೀಗಾಗಿ ಗ್ರಾಹಕರ ಖಾತೆಗಳನ್ನು ಆಪರೇಟ್ ಮಾಡುವ ಅಧಿಕಾರ ಮಂಜುನಾಥ ಭಟ್ಟ ಅವರಿಗಿತ್ತು. ಅದನ್ನು ದುರುಪಯೋಗಪಡಿಸಿಕೊಂಡು ಅವರು ಸರಿಸುಮಾರು 3.51ಕೋಟಿ ರೂ ಲೂಟಿ ಮಾಡಿದ್ದಾರೆ. ಮುಖ್ಯವಾಗಿ ಹಿರಿಯ ನಾಗರಿಕರು ಹಾಗೂ ಅಪರಿಚಿತ ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.
Advertisement. Scroll to continue reading.
2025ರ ಸೆಪ್ಟೆಂಬರ್ 29ರಂದು ಈ ಪ್ರಕರಣ ಬೆಳಕಿಗೆ ಬಂದಿದೆ. ಆ ದಿನ ಬ್ಯಾಂಕ್ ಗ್ರಾಹಕ ಮಹಾಬಲೇಶ್ವರ ಆರ್ ಹೆಗಡೆ ಅವರು ಸಿದ್ದಾಪುರ ಶಾಖೆಗೆ ಬಂದು ತಮ್ಮ ಠೇವಣಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಒಂದು ವರ್ಷ ಮೊದಲೇ ಅವರ 440500ರೂ ಮೌಲ್ಯದ ಠೇವಣಿ ಮುಕ್ತಾಯವಾದ ಬಗ್ಗೆ ಬ್ಯಾಂಕಿನ ಕಂಪ್ಯುಟರ್ ಮಾಹಿತಿ ಕಾಣಿಸಿತು. ಮಹಾಬಲೇಶ್ವರ ಹೆಗಡೆ ಅವರ ಕೈಯಲ್ಲಿದ್ದ ಠೇವಣಿ ಪತ್ರ ನೋಡಿದಾಗ ಅದು ನಕಲಿ ಎಂದು ಅರಿವಾಯಿತು. ಕರ್ನಾಟಕ ಬ್ಯಾಂಕ್ ಹೆಸರಿನಲ್ಲಿಯೇ ನಕಲಿ ರಸೀದಿ ಹಾಗೂ ಪ್ರಮಾಣ ಪತ್ರ ನೀಡಿದವರ ಹುಡುಕಾಟ ನಡೆಸಿದಾಗ ಮಂಜುನಾಥ ಭಟ್ಟ ಅವರ ಮುಖವಾಡ ಕಳಚಿ ಬಿದ್ದಿತು.
ಅದಾದ ನಂತರ ಬ್ಯಾಂಕಿನವರು ಆಂತರಿಕ ತನಿಖೆ ನಡೆಸಿದರು. ಆಗ, ಮಂಜುನಾಥ ಭಟ್ಟರು ಮಹಾಬಲೇಶ್ವರ ಆರ್ ಹೆಗಡೆ ಅವರ ಠೇವಣಿಯನ್ನು ಮುರಿದು, ಆ ಹಣವನ್ನು ತಮ್ಮ ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವುದು ಗೊತ್ತಾಯಿತು. ಗ್ರಾಹಕರಿಗೆ ಈ ವಿಷಯ ಅರಿವಾಗದ ಹಾಗೇ ಮಾಡಲು ಎಸ್ ಎಂ ಎಸ್ ಸೇವೆ ಸ್ಥಗಿತಗೊಳಿಸಿದ್ದು ಸಹ ಈ ವೇಳೆ ಗಮನಕ್ಕೆಬಂದಿತು. ಆಂತರಿಕ ತನಿಖೆ ಮುಂದುವರೆದಾಗ ಮಹಾಬಲೇಶ್ವರ ಹೆಗಡೆ ಅವರಂತೆ ಅನೇಕರಿಗೆ ಮಂಜುನಾಥ ಭಟ್ಟ ಅವರು ವಂಚಿಸಿರುವುದು ಗೊತ್ತಾಯಿತು. ಬ್ಯಾಂಕ್ ಗ್ರಾಹಕರ ಠೇವಣಿ ಮುಚ್ಚಿ, ಎಸ್‌ಎಂಎಸ್ ಅಲರ್ಟ ಸೇವೆ ರದ್ದುಗೊಳಿಸಿ ಗ್ರಾಹಕರಿಗೆ ಠೇವಣಿ ಮುಂದುವರೆದ ಬಗ್ಗೆ ನಕಲಿ ಪ್ರಮಾಣ ಪತ್ರ ನೀಡಿದ ಅನೇಕ ನಿರ್ದಶನಗಳು ಸಿಕ್ಕವು.
ಕರ್ನಾಟಕ ಬ್ಯಾಂಕಿನವರು ಇನ್ನಷ್ಟು ಆಳಕ್ಕೆ ತನಿಖೆ ನಡೆಸಿದಾಗ ಒಟ್ಟು 3,51,84.349ರೂ ಹಣಕಾಸಿನ ಅವ್ಯವಹಾರ ಕಾಣಿಸಿತು. ಈ ಎಲ್ಲಾ ಹಣವೂ ಕರ್ನಾಟಕ ಬ್ಯಾಂಕಿನ ಉದ್ಯೋಗಿ ಮಂಜುನಾಥ ಭಟ್ಟರೇ ಕಬಳಿಸಿರುವುದು ನೋಡಿ ಬ್ಯಾಂಕಿನ ಶಾಖಾ ಪ್ರಬಂಧಕ ಶಂಬುಲಿoಗ ಭಟ್ಟ ಅವರು ಆಘಾತಕ್ಕೆ ಒಳಗಾದರು. ಈ ಎಲ್ಲಾ ವಿಷಯಗಳ ಬಗ್ಗೆ ಮೇಲಧಿಕಾರಿಗಳಿಗೆ ಅವರು ಮಾಹಿತಿ ನೀಡಿದ್ದು, ಕೊನೆಗೆ ಮೂರುವರೆ ಕೋಟಿ ರೂ ವಂಚಿಸಿ ಬ್ಯಾಂಕಿಗೆ ಮೂರು ನಾಮ ಹಾಕಿದ ಮಂಜುನಾಥ ಭಟ್ಟರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. `ಮಂಜುನಾಥ ಭಟ್ಟ ಒಬ್ಬರೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಲೂಟಿ ಹೊಡೆಯುವ ಧೈರ್ಯ ಮಾಡಿರಲಿಕ್ಕಿಲ್ಲ. ಅವರ ಜೊತೆ ಇನ್ನಿತರರು ಶಾಮೀಲಾಗಿದ್ದಾರೆ’ ಎಂಬ ಶಂಕೆಯಿದೆ.
ನಿಮ್ಮ ಮೊಬೈಲಿಗೆ ಬ್ಯಾಂಕ್ ಎಸ್‌ಎಎಸ್ ಬರುತ್ತಿದೆಯಾ? ನಿಮ್ಮ ಬಳಿಯಿರುವ ಠೇವಣಿ ಅಸಲಿಯಾ? ನಕಲಿಯಾ? ಈಗಲೇ ಪರಿಕ್ಷಿಸಿಕೊಳ್ಳಿ!