ಯಲ್ಲಾಪುರದ ಟಿಎಂಎಸ್ ವಿಷಯವಾಗಿ ಎರಡು ಬಣದ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದ್ದು, ಇಲ್ಲಿನ ವಿಷಯಗಳು ಗೊಂದಲದ ಗೂಡಾಗಿದೆ. ಟಿ ಎಂ ಎಸ್ ಚುನಾವಣೆಯಲ್ಲಿ ಮತದಾನ ಮಾಡಿದ ಸದಸ್ಯರು ಫಲಿತಾಂಶದ ಬಗ್ಗೆ ಕಾಯುತ್ತಿದ್ದು, ಅಂತಿಮ ನಿರ್ಣಯ ಮಾತ್ರ ಈವರೆಗೂ ಹೊರಬಿದ್ದಿಲ್ಲ.
ಟಿ ಎಂ ಎಸ್ ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಿ ಸರ್ಕಾರ ಆದೇಶಿಸಿತ್ತು. ಅದಾದ ನಂತರ ಆ ಆದೇಶಕ್ಕೆ ತಡೆಯಾಜ್ಞೆ ಬಂದ ಸುದ್ದಿ ಬಂದಿತ್ತು. ಈ ನಡುವೆ ಮತ್ತೆ ಆಡಳಿತಾಧಿಕಾರಿ ವಿಷಯ ಮುನ್ನೆಲೆಗೆ ಬಂದಿದೆ. ಒಟ್ಟಿನಲ್ಲಿ ಟಿಎಂಎಸ್ ಆಡಳಿತ ಮಂಡಳಿಯ ವಿಷಯ ಮುಂದೆನಾಗುತ್ತದೆ? ಎನ್ನುವುದರ ಬಗ್ಗೆ ಅಲ್ಲಿನ ಸದಸ್ಯರ ಜೊತೆ ಸಾರ್ವಜನಿಕರಲ್ಲಿಯೂ ಕುತೂಹಲ ಮೂಡಿಸಿದೆ.
ಎನ್ ಕೆ ಭಟ್ಟ ಅಗ್ಗಾಶಿಕುಂಬ್ರಿ ನೇತೃತ್ವದ ಆಡಳಿತ ಮಂಡಳಿ ಇಲ್ಲಿ ಅಧಿಕಾರದಲ್ಲಿತ್ತು. ಅವರ ಅಧಿಕಾರ ಅವಧಿ ಮುಕ್ತಾಯದ ಹಂತದಲ್ಲಿರುವುದರಿAದ ಸೆಪ್ಟೆಂಬರ್ 28ರಂದು ಟಿಎಂಎಸ್ ಆಡಳಿತ ಮಂಡಳಿಯ ಆಯ್ಕೆಗಾಗಿ ಚುನಾವಣೆ ನಡೆದಿತ್ತು. ಆದರೆ, ಚುನಾವಣೆಯ ವಿಚಾರವಾಗಿ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಾಕಿ ಹಿನ್ನಲೆ ಮತ ಎಣಿಕೆ ನಡೆದಿರಲಿಲ್ಲ. ಹಾಗಾಗಿ ನೂತನ ಆಡಳಿತ ಮಂಡಳಿ ಸಹ ಅಸ್ತಿತ್ವಕ್ಕೆ ಬಂದಿರಲಿಲ್ಲ.
ಈ ನಡುವೆ ಅಕ್ಟೋಬರ್ 13ರಂದು ಎನ್ ಕೆ ಭಟ್ಟ ಅಗ್ಗಾಶಿಕುಂಬ್ರಿ ಅವರ ಅವಧಿ ಮುಕ್ತಾಯವಾಗಿದ್ದು, ಅಕ್ಟೊಬರ್ 15ರಂದು ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ನಡೆದಿತ್ತು. ಸಂಘದ ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಅಜ್ಮತ್ ಉಲ್ಲಾ ಖಾನ್ ಅವರು ಟಿಎಂಎಸ್ ಗೆ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಶಿರಸಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ್ ಶಿರಹಟ್ಟಿ ಅವರು ಅಗಸ್ಟ್ 15ರಂದು ಆಡಳಿತಾಧಿಕಾರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದರು.
ಅದಾದ ಮರುದಿನವೇ ಆಡಳಿತಾಧಿಕಾರಿ ನೇಮಿಸಿ ಸಹಕಾರಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ ಮಾಹಿತಿ ಬಂದಿತು. ಅವಧಿ ಮುಗಿಯುವ ಮುನ್ನ ಆಡಳಿತಾಧಿಕಾರಿ ನೇಮಕ ವಿಚಾರವಾಗಿ ಎನ್ ಕೆ ಭಟ್ಟ ಅವರ ತಂಡ ಧಾರವಾಡ ಉಚ್ಛ ನ್ಯಾಯಾಲಯದ ಮೋರೆ ಹೋಗಿದ್ದು, ಆಡಳಿತಾಧಿಕಾರಿ ಅಧಿಕಾರ ಸ್ವೀಕರಿಸದೇ ಇದ್ದರೆ ಆಡಳಿತ ಮಂಡಳಿ ಮುಂದುವರೆಯುವ ಬಗ್ಗೆ ನ್ಯಾಯಾಲಯ ಹೇಳಿತ್ತು. ಹೀಗಾಗಿ ಹಳೆಯ ಆಡಳಿತ ಮಂಡಳಿಗೆ ಜಯ ಸಿಕ್ಕ ಬಗ್ಗೆ ಸುದ್ದಿಯಾಗಿತ್ತು.
ಆದರೆ, ನ್ಯಾಯಾಲಯದ ಆದೇಶ ಬರುವ ಮುಂಚಿನ ದಿನಾಂಕದ ಜೊತೆ ತಮ್ಮ ಟಿಎಂಎಸ್ ದಾಖಲೆಗಳಲ್ಲಿ ಆಡಳಿತಾಧಿಕಾರಿಗಳ ಸಹಿ ಬಿದ್ದಿದೆ. ಸದ್ಯ ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ಟಿಎಂಎಸ್ ಸಂಸ್ಥೆಗೆ ಆಡಳಿತ ಮಂಡಳಿ ಬದಲು ಆಡಳಿತಾಧಿಕಾರಿಗಳ ಪ್ರಭಾವವೇ ಅಧಿಕವಾಗಿದೆ. ಆಡಳಿತ ಮಂಡಳಿ ಹಾಗೂ ಆಡಳಿತ ಅಧಿಕಾರಿಗಳ ಅಧಿಕಾರದ ಬಗ್ಗೆ ಎಪಿಎಂಸಿ ಸುತ್ತಲೂ ಚರ್ಚೆ ನಡೆಯುತ್ತಿದ್ದು, ಮುಂದಿನ ನಡೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ.