ಚಿಕ್ಕ ವಯಸ್ಸಿನಲ್ಲಿಯೇ ದುಶ್ಚಟಕ್ಕೆ ದಾಸರಾಗಿದ್ದ ಶಿರಸಿಯ ರಾಘವೇಂದ್ರ ಬಸರಕೋಡ್ ಅವರು ವೈದ್ಯರು ನೀಡಿದ ಸೂಚನೆ ಪಾಲಿಸದ ಕಾರಣ ಸಾವನಪ್ಪಿದ್ದಾರೆ. ಚಂದದ ಹೆಂಡತಿ, ಸುಂದರ ಸಂಸಾರದ ಜೊತೆ ಬಂಧು-ಬಳಗವನ್ನು ಬಿಟ್ಟು ಅವರು ದೂರ ಹೋಗಿದ್ದಾರೆ.
ಶಿರಸಿಯ ನ್ಯೂ ಕೆಎಚ್‌ಬಿ ಕಾಲೋನಿಯ ಚಂದನ ಬಾಲಮಂದಿರ ಬಳಿ ರಾಘವೇಂದ್ರ ಬಸರಕೋಡ್ (33) ಅವರು ವಾಸವಾಗಿದ್ದರು. ಮೆಕಾನಿಕ್ ಆಗಿದ್ದ ಅವರು ಮಧ್ಯಪಾನಕ್ಕೆ ಅಂಟಿಕೊAಡಿದ್ದರು. ಅವರ ಆ ದುಶ್ಚಟ ಮಿತಿಮೀರಿದ ಕಾರಣ ಲಿವರ್ ಹಾಳಾಗಿತ್ತು. ಪಿತ್ತಕೋಶದ ಸಮಸ್ಯೆ ಸಹ ಶುರುವಾಗಿತ್ತು. ಇದೇ ಕಾರಣದಿಂದ ಅವರು ಹೊಟ್ಟೆನೋವಿನಿಂದ ಬಳಲುತ್ತಿದ್ದರು.
ರಾಘವೇಂದ್ರ ಬಸರಕೋಡ್ ಅವರು ಅನಾರೋಗ್ಯದ ಕಾರಣದಿಂದ ನೊಂದಿದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು ಮಧ್ಯಪಾನ ಬಿಡುವಂತೆ ಸಲಹೆ ನೀಡಿದ್ದರು. ಕುಟುಂಬದವರು ಸಹ ದುಶ್ಚಟದಿಂದ ದೂರವಿರುವಂತೆ ಮನವಿ ಮಾಡಿದ್ದರು. ಆದರೆ, ಮಧ್ಯಪಾನ ಮಾಡುವದನ್ನು ಬಿಟ್ಟು ಬೇರೆನೂ ಮಾಡಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ.
ಅನಾರೋಗ್ಯದ ಕಾರಣ ಮಾನಸಿಕವಾಗಿ ಕುಗ್ಗಿದ್ದ ರಾಘವೇಂದ್ರ ಬಸರಕೋಡ್ ಅವರು ಆತ್ಮಹತ್ಯೆಯ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದರು. `ಸಾಯುವುದೇ ಮೇಲು’ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಆಗ, ಅವರ ಕುಟುಂಬದವರೆಲ್ಲ ಸೇರಿ ಅವರನ್ನು ಸಮಾಧಾನ ಮಾಡುತ್ತಿದ್ದರು. ಅಕ್ಟೊಬರ್ 23ರ ರಾತ್ರಿ ರಾಘವೇಂದ್ರ ಬಸರಕೋಡ್ ಅವರು ಮನೆಯಿಂದ ಹೊರ ಹೋದವರು ಮರಳಿ ಬರಲಿಲ್ಲ. ಹುಡುಕಾಟ ನಡೆಸಿದಾಗ ಮನೆ ಪಕ್ಕದ ಖಾಲಿ ಸೈಟಿನಲ್ಲಿ ಅವರು ಬಿದ್ದಿದ್ದರು.
ಅರೆಪ್ರಜ್ಞಾವಸ್ಥೆಯಲ್ಲಿದ್ದ ರಾಘವೇಂದ್ರ ಬಸರಕೋಡ್ ಅವರನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಪರೀಕ್ಷಿಸಿದ ವೈದ್ಯರು ರಾಘವೇಂದ್ರ ಬಸರಕೋಡ್ ಅವರು ಇನ್ನಿಲ್ಲ ಎಂದರು. ಈ ಎಲ್ಲಾ ಘಟನಾವಳಿಗಳ ಬಗ್ಗೆ ರಾಘವೇಂದ್ರ ಬಸರಕೋಡ್ ಅವರ ಪತ್ನಿ ಕೃತಿಕಾ ಪೊಲೀಸರಲ್ಲಿ ವಿವರಿಸಿದರು. ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿ, ಶವ ಬಿಟ್ಟುಕೊಟ್ಟರು.