ಹಣಕಾಸು ವಿಷಯವಾಗಿ ಕಾರವಾರದಲ್ಲಿ ಹೊಡೆದಾಟ ನಡೆದಿದೆ. ಕಡವಾಡ ಸುಲ್ತಾನಪುರದ ಮಹಮದ್ ರಯಾನ್ ಹಾಗೂ ಕಡವಾಡದ ಮಹಾದೇವ ದೇವಸ್ಥಾನದ ಬಳಿಯ ಕಾರ್ತಿಕ ಕಡವಾಡಕರ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ದೀಪಿಕಾ ಕಡವಾಡಕರ ಹಾಗೂ ಅಮೋಘ ಕಡವಾಡಕರ್ ಸಹ ಮಹಮದ್ ರಯಾನ್ ಅವರಿಗೆ ಬೆದರಿಕೆ ಒಡ್ಡಿದ್ದಾರೆ.
ಮಹಮದ್ ರಯಾನ್ ಅವರು ವರ್ಷದ ಹಿಂದೆ ಪ್ಲಿಪ್ ಕಾರ್ಟ ಡಿಲೆವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದರು. ಆ ಅವಧಿಯಲ್ಲಿ ಕಾರ್ತಿಕ ಕಡವಾಡಕರ್ ಅವರು ಆನ್‌ಲೈನ್ ಮೂಲಕ 3 ಸಾವಿರ ರೂ ಬೆಲೆಯ ಶೂ ಆರ್ಡರ್ ಮಾಡಿದ್ದರು. ಮಹಮದ್ ರಯಾನ್ ಅವರು ಕಾರ್ತಿಕ ಕಡವಾಡಕರ್ ಅವರ ಮನೆಗೆ ಶೂ ಡಿಲೆವರಿ ಮಾಡಲು ಹೋಗಿದ್ದರು. ಆಗ, ಕಾರ್ತಿಕ ಕಡವಾಡಕರ್ ಅವರು `ತನ್ನ ಬಳಿ ದುಡ್ಡಿಲ್ಲ. ಈಗ ನೀನೇ ದುಡ್ಡು ಕೊಡು. ನಂತರ ನಾನು ಮರಳಿಸುವೆ’ ಎಂದಿದ್ದರು. ಆಗ, ಮಹಮದ್ ರಯಾನ್ ಅವರು 3 ಸಾವಿರ ರೂ ಹಣ ಪಾವತಿಸಿ ಆ ಬೂಟು ಬಿಡಿಸಿಕೊಟ್ಟಿದ್ದರು.
ಅದಾಗಿ ಒಂದು ವರ್ಷ ಕಳೆದರೂ 3 ಸಾವಿರ ರೂಪಾಯಿಯನ್ನು ಕಾರ್ತಿಕ ಕಡವಾಡಕರ್ ಅವರು ಮರು ಪಾವತಿ ಮಾಡಿರಲಿಲ್ಲ. ಈ ಬಗ್ಗೆ ಮಹಮದ್ ರಯಾನ್ ಸಾಕಷ್ಟು ಬಾರಿ ಕೇಳಿದ್ದರು. ಆದರೆ, ಕಾರ್ತಿಕ ಕಡವಾಡಕರ್ ಆ ಹಣ ಮಾತ್ರ ಕೊಡುತ್ತಿರಲಿಲ್ಲ. ಮೂರು ವಾರದ ಹಿಂದೆ ಹಣದ ವಿಷಯವಾಗಿ ಕಡವಾಡ-ಸುಂಕೇರಿ ಸೇತುವೆ ಬಳಿ ಕಾರ್ತಿಕ ಕಡವಾಡಕರ ಹಾಗೂ ಮಹಮದ್ ರಯಾನ್ ನಡುವೆ ಜಗಳ ನಡೆಯಿತು. ಆಗ, `ನಿನ್ನ ಹಣ ಕೊಡುವುದೇ ಇಲ್ಲ’ ಎಂದು ಕಾರ್ತಿ ಕಡವಾಡಕರ್ ಜೋರಾಗಿ ಹೇಳಿದ್ದರು.
ಹೀಗಿರುವಾಗ ಅಕ್ಟೊಬರ್ 1ರಂದು ದಾಂಡಿಯಾ ನೋಡಲು ಸುಲ್ತಾನಪುರ ರಸ್ತೆಯಲ್ಲಿ ಮಹಮದ್ ರಯಾನ್ ಅವರು ನಡೆದು ಹೋಗುತ್ತಿದ್ದರು. ಆಗ, ಕಾರ್ತಿಕ ಕಡವಾಡಕರ್ ಹಾಗೂ ದೀಪಿಕಾ ಕಡವಾಡಕರ್ ಅಲ್ಲಿ ಸ್ಕೂಟಿಯಲ್ಲಿ ಬಂದು ಮಹಮದ್ ರಯಾನ್ ಅವರನ್ನು ಅಡ್ಡಗಟ್ಟಿದರು. ಆಗಲೂ ಅವರಿಬ್ಬರು ಜಗಳ ಶುರು ಮಾಡಿದ್ದು, ಕಾರ್ತಿಕ ಕಡವಾಡಕರ್ ಅವರು ತಮ್ಮ ಕೈಯಲ್ಲಿರುವ ಕಬ್ಬಿಣದ ಬಳೆಯಿಂದ ಮಹಮದ್ ರಯಾನ್ ಅವರಿಗೆ ಹೊಡೆದರು. ಪರಿಣಾಮ ಮಹಮದ್ ರಯಾನ್ ಅವರು ಆಸ್ಪತ್ರೆ ಸೇರಿದರು. ಆ ವೇಳೆ ಅಮೋಘ ಕಡವಾಡಕರ್ ಫೋನ್ ಮಾಡಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಮಹಮದ್ ರಯಾನ್ ಅವರು ಪೊಲೀಸ್ ದೂರು ನೀಡಿದರು.