ಆರೋಗ್ಯ, ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಬೆದರಿಸುವ ಹಾಗೂ ಹಣ ವಸೂಲಿ ಮಾಡುವ ಜಾಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಅನಾಥ ಆಶ್ರಮ, ವೃದ್ಧಾಶ್ರಮದ ಹೆಸರಿನಲ್ಲಿ ಜನರನ್ನು ಯಾಮಾರಿಸುತ್ತಿದ್ದ ವಂಚಕರು ಇದೀಗ ಸರ್ಕಾರಿ ಸೋಗಿನಲ್ಲಿ ಆಗಮಿಸಿ ಮೋಸ ಮಾಡುತ್ತಿದ್ದಾರೆ.
ಕಾರವಾರದ ಚಿತ್ತಾಕುಲದಲ್ಲಿ ಆರೋಗ್ಯ ಸಿಬ್ಬಂದಿ ಹೆಸರಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರನ್ನು ವಂಚಿಸುವ ಜಾಲ ಕೆಲಸ ಮಾಡಿದೆ. ಅಲ್ಲಿನ ಪ್ರಮೋದ ನಾಯ್ಕ ಎಂಬಾತರ ಕುಟುಂಬಕ್ಕೆ ವಂಚಕರು 40 ಸಾವಿರ ರೂ ಮೋಸ ಮಾಡಿದ್ದಾರೆ. ಆರೋಗ್ಯ ಇಲಾಖೆ ಹೆಸರು ಹೇಳಿ ಉಚಿತ ಚಿಕಿತ್ಸೆ ಎಂದು ಪರಿಚಯಿಸಿಕೊಂಡ ವಂಚಕರು `ಮಕ್ಕಳಾಗದವರಿಗೆ ಔಷಧಿ ಕೊಡುತ್ತೇವೆ’ ಎಂದು ನಂಬಿಸಿ 40 ಸಾವಿರ ರೂ ಪಡೆದು ಪರಾರಿಯಾಗಿದ್ದಾರೆ. ಅಕ್ಟೊಬರ್ 9ರಂದು ಕಾರವಾರದಲ್ಲಿ ಮೋಸ ಮಾಡಿದ ಈ ಜಾಲದವರು ಅಕ್ಟೊಬರ್ 14ರಂದು ಭಟ್ಕಳ ಪ್ರವೇಶಿಸಿದ್ದಾರೆ.
ಭಟ್ಕಳದಲ್ಲಿಯೂ ಆಸ್ಪತ್ರೆ ಹೆಸರಿನಲ್ಲಿ ನಕಲಿ ವೈದ್ಯರು ಮೋಸ ಮಾಡುವ ಸಂಗತಿ ಬೆಳಕಿಗೆ ಬಂದಿದೆ. ಇಲ್ಲಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅ 14ರಂದು ಬೆಳಿಗ್ಗೆ 8.45ಕ್ಕೆ ಬಿಳಿ ಮಾರುತಿ ಆಲ್ಟೋ ಕಾರಿನಲ್ಲಿ ಬಂದ ಅಪರಿಚಿತರು ಹಲವು ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಪಾರ್ಶ್ವವಾಯು ಪೀಡಿತರು, ಮಕ್ಕಳಾಗದ ದಂಪತಿಗಳನ್ನು ಭೇಟಿ ಮಾಡಿ ಹಣ ಕೇಳಿದ್ದಾರೆ. ಕಾರನ್ನು ದೂರದಲ್ಲಿ ನಿಲ್ಲಿಸಿ ಒಂಟಿ ಮನೆಗಳಿಗೆ ವಂಚಕರು ಭೇಟಿ ನೀಡುತ್ತಿದ್ದಾರೆ. `ಬೆಂಗಳೂರಿನ ಸಾಯಿಬಾಬಾ ಆಸ್ಪತ್ರೆಯಿಂದ ಪ್ರಚಾರಕ್ಕೆ ಬಂದಿದ್ದೇವೆ. ಉಚಿತ ಔಷಧಿ ಕೊಡುತ್ತೇವೆ’ ಎಂದು ಹೇಳಿದ ವಂಚಕರು ನಂತರ 40 ಸಾವಿರ ರೂ ಬೇಡಿದ್ದಾರೆ. ಸಾಯಿಬಾಬಾ ಆಸ್ಪತ್ರೆ ಹೆಸರಿನಲ್ಲಿ ಒಂದು ಫೋನ್ ನಂ ಸಹ ನೀಡಿ ನಂಬಿಕೆ ಬರುವಂತೆ ಮಾಡಿದ್ದಾರೆ. `ಸಿಸಿ ಕ್ಯಾಮರಾ ಆಧಾರದಲ್ಲಿ ಕಾರಿನ ಬೆನ್ನು ಹತ್ತಿದರೆ ಆ ವಂಚಕರನ್ನು ಸೆರೆಹಿಡಿಯಲು ಸಾಧ್ಯ’ ಎಂಬುದು ಹೆಬಳೆ ಊರಿನವರ ಮಾತು.
ಶಿರಸಿ ನಗರಸಭೆ ಹೆಸರು ಹೇಳಿಯೂ ಕೆಲವರು ವಂಚಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ನೆಪದಲ್ಲಿ ಮನೆ ಮನೆಗೆ ಭೇಟಿ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಗರಸಭೆಯವರೇ ಪ್ರಕಟಣೆ ನೀಡಿ ಜನರಿಗೆ ಮೋಸ ಹೋಗದಂತೆ ಮನವಿ ಮಾಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸುವಂತೆಯೂ ನಗರಸಭೆ ಅಧಿಕಾರಿಗಳು ಕೋರಿದ್ದಾರೆ. ಇದರೊಂದಿಗೆ ಶಿರಸಿಯ ಪೊಲೀಸ್ ಇನ್ಸಪೆಕ್ಟರ್ ಹೆಸರಿನಲ್ಲಿಯೂ ನಕಲಿ ಫೋನ್ ಕರೆ ಬರುತ್ತಿದೆ. ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಳ್ಳುವ ಅಪರಿಚಿತರು ಎಫ್‌ಐಆರ್ ದಾಖಲಿಸುವುದಾಗಿ ಬೆದರಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಫೋನ್ ಮಾಡುವವರ ಮೊಬೈಲ್ ಸಂಖ್ಯೆ ಜೊತೆ ಪೊಲೀಸರಿಗೆ ಮಾಹಿತಿ ನೀಡಿ ಎರಡು ವಾರ ಕಳೆದರೂ ಕ್ರಮವಾಗಿಲ್ಲ.
ಒಟ್ಟಾರೆಯಾಗಿ ಆರೋಗ್ಯ ಇಲಾಖೆ, ನಗರಸಭೆ ಹೆಸರಿನಲ್ಲಿ ವಂಚಿಸುವವರು ಹಾಗೂ ಪೊಲೀಸ್ ಹೆಸರಿನಲ್ಲಿ ಬೆದರಿಕೆ ಒಡ್ಡುವವರ ಜಾಲದ ಹಿಂದೆ ದೊಡ್ಡ ದೊಡ್ಡ ವ್ಯಕ್ತಿಗಳು ಶಾಮೀಲಾಗಿರುವ ಶಂಕೆವ್ಯಕ್ತವಾಗಿದೆ. ಕಾರವಾರದ ಚಿತ್ತಾಕುಲದಲ್ಲಿ 40 ಸಾವಿರ ರೂ ಕಾಣೆಯಾಗಿದ್ದು ಮಾತ್ರ ಪೊಲೀಸ್ ಪ್ರಕರಣವಾಗಿದ್ದು, ಶಿರಸಿ ನಗರಸಭೆ ಹೆಸರಿನಲ್ಲಿ ವಸೂಲಿ ಮಾಡಿದವರ ಫೋಟೋ-ಮಾಹಿತಿ ಇದ್ದರೂ ಕ್ರಮವಾಗಿಲ್ಲ. ಭಟ್ಕಳದಲ್ಲಿ ಆರೋಗ್ಯ ಇಲಾಖೆಯ ಹೆಸರಿನಲ್ಲಿ ವಂಚನೆ ಪ್ರಯತ್ನ ನಡೆದ ಬಗ್ಗೆ ಫೋನ್ ಸಂಖ್ಯೆ ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಿರಸಿ ಪೊಲೀಸ್ ಇನ್ಸಪೆಕ್ಟರ್ ಹೆಸರಿನಲ್ಲಿ ಬೆದರಿಕೆ ಕರೆಯ ಧ್ವನಿ ಮುದ್ರಣದ ಜೊತೆ ಲಿಖಿತವಾಗಿ ಗಮನಕ್ಕೆ ತಂದರೂ ವಿಚಾರಣೆ ನಡೆದಿಲ್ಲ. ಈ ಎಲ್ಲಾ ಹಿನ್ನಲೆ ಪ್ರಭಾವಿ ವ್ಯಕ್ತಿಗಳೇ ಅಮಾಯಕರನ್ನು ಯಾಮಾರಿಸುವ ಕೆಲಸ ಮಾಡುತ್ತಿರುವ ಅನುಮಾನವ್ಯಕ್ತವಾಗಿದೆ.