ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ದೀಪಾವಳಿ ಶುಭಾಷಯ ಕೋರಿದ್ದಾರೆ. ಜೊತೆಗೆ `ಹಸಿರು ಪಟಾಕಿಗಳನ್ನು ಮಾತ್ರ ಬಳಸಿ’ ಎಂದು ಅವರು ಕರೆ ನೀಡಿದ್ದಾರೆ. ಅದರಲ್ಲಿಯೂ `ಸರ್ಕಾರ ಸೂಚಿಸಿದ ಸಮಯದಲ್ಲಿ ಮಾತ್ರ ಪಟಾಕಿ ಬಳಸಿ’ ಎಂದವರು ಮನವಿ ಮಾಡಿದ್ದಾರೆ.
`ಪ್ರತಿ ವರ್ಷವು ದೀಪಾವಳಿ ಹಬ್ಬವನ್ನು ಸಂಪ್ರಾದಾಯಿಕವಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ದೀಪಾವಳಿ ಹಬ್ಬವನ್ನು ದೀಪಗಳ ಸಾಲಿನ ಮೂಲಕ ಆಚರಿಸಿ ಮನಸ್ಸಿನ ಕತ್ತಲನ್ನು ಹೊರದೂಡಿ ಬೆಳಕಿನಡೆಗೆ ಸಾಗುವ ಸಂದೇಶವನ್ನು ಸಾರುವುದು ಸಾಮಾನ್ಯವಾಗಿತ್ತು. ಈ ಬಾರಿಯ ದೀಪಾವಳಿಯ ಹಬ್ಬವನ್ನು ಅದಷ್ಟು ದೀಪಗಳನ್ನು ಬೆಳಗಿಸಿ ಸಂಭ್ರಮಿಸೋಣ. ಮಾಲಿನ್ಯರಹಿತ ದೀಪಾವಳಿ ಹಬ್ಬ ಆಚರಿಸೋಣ’ ಎಂದವರು ಕರೆ ನೀಡಿದ್ದಾರೆ.
`ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಷೇಧಿತ ಪಟಾಕಿಗಳನ್ನು ಸಿಡಿಸಬೇಡಿ. ಪಟಾಕಿ ಸಿಡಿಸಿದರೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಹಾಗೂ ಘನತ್ಯಾಜ್ಯ ಉತ್ಪಾದನೆಯಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ’ ಎಂಬುದನ್ನು ಜಿಲ್ಲಾಧಿಕಾರಿಗಳು ನೆನಪಿಸಿದ್ದಾರೆ. `ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಅದನ್ನು ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದAತೆ ಮುನ್ನಚ್ಚರಿಕೆವಹಿಸಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆ, ವೃದ್ಧ ಹಾಗೂ ಅನಾಥಾಶ್ರಮಗಳ ಸುತ್ತಮುತ್ತ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ’ ಎಂದವರು ಅರಿವು ಮೂಡಿಸಿದ್ದಾರೆ.
`ಪಟಾಕಿ ಸಿಡಿತದಿಂದ ಬರುವ ಹೊಗೆ ಅಸ್ತಮಾ ರೋಗಿಗಳು ಹೃದ್ರೋಗಿಗಳು, ವಯೋವೃದ್ಧರು, ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಹೀಗಾಗಿ ಎಲ್ಲಾ ಪಟಾಕಿ ಮಾರಾಟ ಮಾಡುವ ಮಳಿಗೆಗಳಿಗೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಸಾರ್ವಜನಿಕರು ಖರೀದಿಸುವ ಮುನ್ನ ಪಟಾಕಿಯ ಮೇಲಿರುವ ಹಸಿರು ಚಿಹ್ನೆಗಳನ್ನು ಪರೀಕ್ಷಿಸಬೇಕು. ಪಟಾಕಿಯನ್ನು ಸಿಡಿಸುವ ಸಂದರ್ಭದಲ್ಲಿ ಚಿಕ್ಕ ಮಕ್ಕಳ ಜೊತೆ ಪೋಷಕರು ಇದ್ದು, ಅವಘಡಗಳು ನಡೆಯದಂತೆ ನೋಡಿಕೊಳ್ಳಬೇಕು’ ಎಂದವರು ಮನವಿ ಮಾಡಿದ್ದಾರೆ.

ನೀವು ಖರೀದಿಸುವ ಪಟಾಕಿಯಲ್ಲಿ ಈ ಚಿಹ್ನೆ ಇದ್ದರೆ ಮಾತ್ರ ಅದು ಹಸಿರು ಪಟಾಕಿ