ವಧೆ ಮಾಡುವ ಉದ್ದೇಶದಿಂದ ಬೆಳಗಾವಿಯಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದ ಗೋವುಗಳನ್ನು ಯಲ್ಲಾಪುರ ಪೊಲೀಸರು ಹಿಡಿದಿದ್ದಾರೆ. ಬೆಳಗಾವಿಯಿಂದ ಕಲಘಟಕಿವರೆಗಿನ ಎಲ್ಲಾ ಪೊಲೀಸ್ ಠಾಣೆಯವರು ಬಿಟ್ಟು ಕಳುಹಿಸಿದ ವಾಹನಕ್ಕೆ ಅಡ್ಡಲಾಗಿ ಯಲ್ಲಾಪುರ ಪೊಲೀಸರು ಕೈ ಮಾಡಿದ್ದು, ಪಿಎಸ್‌ಐ ಶೇಡಜಿ ಚೌಹಾಣ್ ಹಾಗೂ ರಾಜಶೇಖರ ವಂದಲಿ ಸೇರಿ ಆರು ಜಾನುವಾರುಗಳ ಪ್ರಾಣ ಕಾಪಾಡಿದರು.
ಭಟ್ಕಳದ ಬೆಳಕಂಡ ಮುತ್ತಳ್ಳಿಯ ರಬ್ಬಾನಿ ಬಾಬಾಸಾಬ ಕಚವಿ ಎಂಬಾತರು ಅಕ್ರಮ ಜಾನುವಾರು ಸಾಗಾಟವನ್ನು ಕಸುಬು ಮಾಡಿಕೊಂಡಿದ್ದರು. ತಮ್ಮ ಬುಲೆರೊ ವಾಹನಕ್ಕೆ ಭಟ್ಕಳದ ಮಹಮ್ಮದ್ ಸಿದ್ದಿಕ್ ಅಬ್ದುಲ್ ಅಮೀರ್ ಮಜಾರ ಎಂಬಾತರನ್ನು ಚಾಲಕರನ್ನಾಗಿ ನೇಮಿಸಿಕೊಂಡಿದ್ದರು. ಭಟ್ಕಳದ ಅಲ್ತಾಪ ಎಂಬಾತರನ್ನು ಜೊತೆಗಿರಿಸಿಕೊಂಡು ಅವರು ಬೆಳಗಾವಿಯಿಂದ ಭಟ್ಕಳಕ್ಕೆ ಹಿಂಸಾತ್ಮಕ ರೂಪದಲ್ಲಿ ಗೋವುಗಳ ಸಾಗಾಟ ಮಾಡುತ್ತಿದ್ದರು.
ಬೆಳಗಾವಿಯಿಂದ ಹೊರಟ ಆ ವಾಹನಕ್ಕೆ ಯಾವ ಪೊಲೀಸರು ಕೈ ಮಾಡಲಿಲ್ಲ. ಕೈ ಮಾಡಿದರೂ ಅಕ್ರಮ ಜಾನುವಾರು ಸಾಗಾಟಗಾರರನ್ನು ಪ್ರಶ್ನಿಸಲಿಲ್ಲ. ಹೀಗಾಗಿ ರಾಜಾರೋಷವಾಗಿ ಅವರು ರಾಷ್ಟ್ರೀಯ ಹೆದ್ದಾರಿ ಮೂಲಕ ಯಲ್ಲಾಪುರವನ್ನು ಪ್ರವೇಶಿಸಿದರು. ಆದರೆ, ಯಲ್ಲಾಪುರ ಪೊಲೀಸರು ಆ ವಾಹನವನ್ನು ತಡೆದರು. ಮಲಬಾರ್ ಹೊಟೇಲ್ ಬಳಿ ಪಿಕಪ್ ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ರಬ್ಬಾನಿ ಬಾಬಾಸಾಬ ಕಚವಿ ಹಾಗೂ ಅಲ್ತಾಪ್ ಗಾಡಿಯಿಂದ ಹಾರಿ ಪರಾರಿಯಾದರು. ಮಹಮ್ಮದ್ ಸಿದ್ದಿಕ್ ಅಬ್ದುಲ್ ಅಮೀರ್ ಮಜಾರ ಸಿಕ್ಕಿಬಿದ್ದರು.
ಪಿಕಪ್ ವಾಹನ ತಪಾಸಣೆ ನಡೆಸಿದಾಗ ಅದರಲ್ಲಿ ಆರು ಜಾನುವಾರುಗಳಿದ್ದವು. ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಅವುಗಳನ್ನು ಕಟ್ಟಲಾಗಿತ್ತು. ಒಂದು ಆಕಳು, ಎರಡು ಹೋರಿ ಹಾಗೂ ಮೂರು ಸಣ್ಣ ದನಗಳನ್ನು ಪೊಲೀಸರು ಬಿಡುಗಡೆ ಮಾಡಿದರು. ಪಿಕಪ್ ವಾಹನ ಚಾಲಕ ಕೈ ಮುಗಿದು ಬೇಡಿಕೊಂಡರು ಅಕ್ರಮ ಜಾನುವಾರು ಸಾಗಾಟಗಾರರ ಜೊತೆ ಪೊಲೀಸರು ರಾಜಿ ಆಗಲಿಲ್ಲ. ಓಡಿ ಹೋದವರ ಹೆಸರನ್ನು ಸೇರಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದರು.
ಹಿಂಸಾತ್ಮಕವಾಗಿ ತುಂಬಿಕೊoಡು ಕಲಘಟಗಿ ಕಡೆಯಿಂದ ಅಂಕೋಲಾ ಕಡೆಗೆ ಸಾಗಿಸುತ್ತಿದ್ದರು. ಪಟ್ಟಣದ ಮಲಬಾರ್ ಹೋಟೆಲ್ ಬಳಿ ಪೊಲೀಸರು ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದ್ದಾರೆ.