ಕೂಲಿ ಕೆಲಸ ಬಿಟ್ಟು ಕಾನೂನುಬಾಹಿರ ಆಟಕ್ಕೆ ತೆರಳಿದ್ದ ಶಿರಸಿ ವಿವೇಕಾನಂದ ನಗರದ ಗಣಪತಿ ನಾಯ್ಕ ಅವರ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ ಕನಶೆಟ್ಟಿ ಅವರು ಕ್ರಮ ಜರುಗಿಸಿದ್ದಾರೆ. `ಮತ್ತೊಮ್ಮೆ ಇಂಥ ಕೆಲಸ ಮಾಡಿದರೆ ಇನ್ನಷ್ಟು ಕಠಿಣ ಕ್ರಮ ಜರುಗಿಸುವೆ’ ಎಂದು ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಅಕ್ಟೊಬರ್ 17ರ ಮಧ್ಯಾಹ್ನ ಗಣಪತಿ ಶಾಂತರಾಮ ನಾಯ್ಕ ಅವರು ಯಲ್ಲಾಪುರ ನಾಕಾ ಬಳಿ ಸುತ್ತಾಡುತ್ತಿದ್ದರು. ಅಲ್ಲಿನ ಮೂರು ನಂಬರ್ ಶಾಲೆಯಿಂದ ವಿದ್ಯಾ ನಗರಕ್ಕೆ ಹೋಗುವ ರಸ್ತೆ ಬಳಿ ನಿಂತು ವಿವಿಧ ಬಗೆಯ ಕೈ ಸನ್ನೆ ಮಾಡುತ್ತಿದ್ದರು. ಕೈ ಸನ್ನೆ ಗಮನಿಸದವರನ್ನು ಕೂಗಿ ಕರೆದ ಅವರು `ಅದೃಷ್ಠದ ಆಟ ಆಡಿ ಹಣ ಗೆಲ್ಲಿ’ ಎಂಬ ಆಮೀಷ ಒಡ್ಡುತ್ತಿದ್ದರು. `1ರೂಪಾಯಿ ಕೊಟ್ಟರೆ 80ರೂಪಾಯಿ ಕೊಡುವೆ’ ಎಂದು ಅಲ್ಲಿ ಹೋಗಿ-ಬರುವ ಜನರನ್ನು ನಂಬಿಸಿ ಹಣ ಸಂಗ್ರಹಿಸುತ್ತಿದ್ದರು.
ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ ಕನಶೆಟ್ಟಿ ಅವರಿಗೆ ಗಣಪತಿ ನಾಯ್ಕ ಅವರ ವರ್ತನೆ ಸರಿ ಕಾಣಲಿಲ್ಲ. ಹತ್ತಿರ ಹೋಗಿ ನೋಡಿದಾಗ ಗಣಪತಿ ನಾಯ್ಕ ಅವರು ನಿಷೇಧಿತ ಮಟ್ಕಾ ಆಟದಲ್ಲಿ ತಲ್ಲೀನರಾಗಿರುವುದು ಗೊತ್ತಾಯಿತು. ಪಂಚರ ಜೊತೆ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿ ದಾಳಿ ನಡೆಸಿದ ಬಸವರಾಜ ಕನಶೆಟ್ಟಿ ಅವರು ಗಣಪತಿ ನಾಯ್ಕ ಅವರ ಬಳಿಯಿದ್ದ 1060ರೂ ಹಣವನ್ನು ವಶಕ್ಕೆಪಡೆದರು. ಅಂಕಿ-ಸAಖ್ಯೆ ಬರೆದ ಚೀಟಿ ಜೊತೆ ಬರೆಯಲು ಬಳಸಿದ್ದ ಬಾಲ್‌ಪೆನ್ನನ್ನು ಜಪ್ತು ಮಾಡಿದರು. ಮಟ್ಕಾ ಆಡಿಸುತ್ತಿದ್ದ ಗಣಪತಿ ನಾಯ್ಕ ಅವರ ವಿರುದ್ಧ ನ್ಯಾಯಾಲಯಕ್ಕೆ ವರದಿ ಒಪ್ಪಿಸಿ, ಪ್ರಕರಣ ದಾಖಲಿಸಿದರು.