ಅಂತೂ-ಇoತೂ ಎರಡು ತಿಂಗಳ ಹಿಂದೆ ಶಿರಸಿಯಲ್ಲಿ ಶುರುವಾದ ಇಂದಿರಾ ಕ್ಯಾಂಟಿನ್ ಮುಚ್ಚುವ ಹಂತ ತಲುಪಿದ್ದು, ಶುಕ್ರವಾರ ಬೆಳಗ್ಗೆ ಆರು ಗಂಟೆಗೆ ನಗರಸಭೆ ಅಧಿಕಾರಿಗಳು ಕ್ಯಾಂಟಿನ್ ಬಗಿಲು ತೆಗೆಸಿದ್ದಾರೆ. ಗುರುವಾರ ರಾತ್ರಿಯೇ ಖಾಲಿ ಆದ ಅಕ್ಕಿ-ಬೇಳೆ ಮೊದಲಾದ ಸಾಮಗ್ರಿಗಳನ್ನು ತರಿಸಿ ಸಮಸ್ಯೆಯನ್ನು ಸರಿಪಡಿಸಿದ್ದಾರೆ.
ಅನೇಕ ವರ್ಷಗಳ ನಂತರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್ ಶಿರಸಿಯ ಐದು ಸರ್ಕಲ್ ಬಳಿ ಶುರುವಾಗಿದೆ. ಆದರೆ, ಶುರುವಾದ 60 ದಿನಗಳ ಒಳಗೆಯೇ ಕ್ಯಾಂಟಿನ್ ಸೊರಗಲು ಶುರುವಾಗಿದ್ದು, ಗುರುವಾರ ಸಂಜೆ ಇಲ್ಲಿ ದಿನಸಿ ಸಾಮಗ್ರಿಗಳ ಅಭಾವ ಕಾಣಿಸಿತು. ರಾತ್ರಿ ಊಟಕ್ಕೆ ಬಂದವರು ಅಕ್ಕಿ, ಬೆಳೆ, ತರಕಾರಿ, ಎಣ್ಣೆ ಖಾಲಿ ಆಗಿರುವುದನ್ನು ಗಮನಿಸಿದ್ದರು. ಬುಧವಾರವೇ ಅಕ್ಕಿ ಖಾಲಿ ಆಗದ ಕಾರಣ ಗುರುವಾರ ಬೆಳಗ್ಗೆ ಇಡ್ಲಿ ಸಹ ಸಿದ್ಧವಾಗಿರಲಿಲ್ಲ. ಶುಕ್ರವಾರ ಕ್ಯಾಂಟೀನ್ ಹೇಗೆ ಆರಂಭಿಸಬೇಕು? ಎನ್ನುವ ಚಿಂತೆಯಲ್ಲಿ ಅಲ್ಲಿನ ಕೆಲಸಗಾರರು ಮುಳುಗಿದ್ದರು. ಕ್ಯಾಂಟಿನಿನಲ್ಲಿ ಊಟ-ತಿಂಡಿ ಸಿಗದ ಕಾರಣ ಗ್ರಾಹಕರು ಬೇಸರದಲ್ಲಿದ್ದರು.
ಕ್ಯಾಂಟಿನಿಗೆ ಸಾಮಗ್ರಿ ಪೂರೈಸುವ ಅಂಗಡಿಯವರಿಗೆ 25 ಸಾವಿರ ರೂ ಬಾಕಿಯಿರುವುದು ಗಮನಕ್ಕೆ ಬಂದಿತು. ಕಾಸು ಕೊಡದೇ ಸಾಮಗ್ರಿ ಪೂರೈಸುವುದಿಲ್ಲ ಎಂದು ಅಂಗಡಿಯವರು ಹೇಳಿದ್ದರಿಂದ ರಾತ್ರಿ ಊಟಕ್ಕೆ ಅನ್ನವಿರಲಿಲ್ಲ. ಗುರುವಾರ ಮಧ್ಯಾಹ್ನ ಮಾಡಿದ ಅನ್ನ ಮಾತ್ರ ಬಾಕಿಯಿದ್ದು, ರಾತ್ರಿ ಊಟಕ್ಕೆ ಅನ್ನವಿರಲಿಲ್ಲ. ಅಕ್ಕಿ, ಬೆಳೆ, ತರಕಾರಿ ಯವುದೇ ವಸ್ತು ಬಾರದೇ ಇದ್ದಿದ್ದರಿಂದ ಶುಕ್ರವಾರ ತಿಂಡಿ, ಅಡುಗೆಗೆ ಸಮಸ್ಯೆ ಕಾಡುತ್ತಿತ್ತು. ಜೊತೆಗೆ ಏಳು ಕೆಲಸಗಾರರ ಪೈಕಿ ಮೂವರು ಮಾತ್ರ ಕೆಲಸಕ್ಕಿದ್ದರು. ಪಾತ್ರೆ ತೊಳೆಯುವುದು, ಅಡುಗೆ ಮಾಡುವುದರಿಂದಹಿಡಿದು ಗುಡಿಸಿ ಒರೆಸುವವರೆಗೂ ಎಲ್ಲವನ್ನು ಅವರೇ ಮಾಡುತ್ತಿದ್ದರು.
ಈ ಎಲ್ಲಾ ವಿಷಯಗಳ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕೂಡಲೇ ಅಧಿಕಾರಿಗಳು ಕ್ಯಾಂಟಿನ್’ಗೆ ಧಾವಿಸಿದರು. ರಾತ್ರಿಯೇ ಸಾಮಗ್ರಿಗಳನ್ನು ತರಿಸಿದ್ದು, ಯಾರಿಗೂ ಸಮಸ್ಯೆ ಆಗಬಾರದು ಎಂದು ಸೂಚಿಸಿದರು. ಜೊತೆಗೆ ಶುಕ್ರವಾರ ಬೆಳಗ್ಗೆ ಸಹ ಅಧಿಕಾರಿಗಳು ಆರು ಗಂಟೆಗೆ ಕ್ಯಾಂಟಿನ್ ಎದುರು ಹಾಜರಿದ್ದರು. ಅದಾಗಿಯೂ `ಮೊದಲಿದ್ದ ಗುಣಮಟ್ಟದ ಆಹಾರ ಈಗ ಸಿಗುತ್ತಿಲ್ಲ’ ಎಂದು ಖಾಯಂ ಗ್ರಾಹಕರು ಹೇಳಿದರು.