ಕುಮಟಾದ ಗೋಕರ್ಣ ಕಡಲತೀರದಲ್ಲಿ ಕಳೆದ ವರ್ಷ ಗೋಕರ್ಣ ಉತ್ಸವ ನಡೆಸಲು ಅಲ್ಲಿದ್ದ ಗೋಪುರ ತೆರವುಗೊಳಿಸಲಾಗಿದ್ದು, ಗೋಪುರ ಮರು ನಿರ್ಮಾಣಕ್ಕೆ ಶಾಸಕರು ಸೂಚನೆ ನೀಡಿ ವರ್ಷ ಕಳೆದರೂ ಆ ಕೆಲಸ ನಡೆದಿಲ್ಲ. ಹೀಗಾಗಿ ಬೇರೆಯವರ ಜೀವ ಉಳಿಸಲು ತಮ್ಮ ಜೀವ ಪಣಕ್ಕಿಡುವ ಸಾಹಸಿ ಜೀವ ರಕ್ಷಕರಿಗೆ ಕಡಲ ತೀರದಲ್ಲಿ ಸರಿಯಾದ ಸೂರಿಲ್ಲ!
ಏಳು ವರ್ಷಗಳ ಹಿಂದೆ ಗೋಕರ್ಣ ಕಡಲತೀರದಲ್ಲಿ ಖಾಸಗಿ ಕಂಪನಿಯವರು ವಾಚ್ ಟವರ್ ಮಾದರಿಯ ಗೋಪುರ ನಿರ್ಮಿಸಿ ಕೊಟ್ಟಿದ್ದರು. ಅಲೆಗಳ ಅಬ್ಬರಕ್ಕೆ ಆ ಗೋಪುರ ಕೊಚ್ಚಿ ಹೋಗುತ್ತಿದ್ದು, ಅದನ್ನೇ ಸರಿಪಡಿಸಿ ಬಳಸಲಾಗುತ್ತಿತ್ತು. ಕಳೆದ ವರ್ಷ ಶಿವರಾತ್ರಿ ಅವಧಿಯಲ್ಲಿ ಕಡಲಿನಲ್ಲಿ ಗೋಕರ್ಣ ಉತ್ಸವ ನಡೆಸಲು ನಿರ್ಧರಿಸಲಾಗಿದ್ದು, ಆ ವೇಳೆ ಅಲ್ಲಿದ್ದ ಗೋಪುರವನ್ನು ತೆರವು ಮಾಡಲು ಉದ್ದೇಶಿಸಲಾಯಿತು. ಆಗ, ಜೀವ ರಕ್ಷಕ ಸಿಬ್ಬಂದಿ ಆತಂಕವ್ಯಕ್ತಪಡಿಸಿದರು.
ಗ್ರಾಮ ಪಂಚಾಯತದವರು 15 ದಿನದಲ್ಲಿ ಹೊಸ ಗೋಪುರ ನಿರ್ಮಿಸುವ ಭರವಸೆ ನೀಡಿ ಅದನ್ನು ತೆರವು ಮಾಡಿದರು. ಶಾಸಕ ದಿನಕರ ಶೆಟ್ಟಿ ಅವರು ಸಹ ಹೊಸ ಗೋಪುರ ನಿರ್ಮಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಆದರೆ, ಅದಾಗಿ ವರ್ಷ ಕಳೆದರೂ ಗೋಪುರ ಮಾತ್ರ ನಿರ್ಮಾಣವಾಗಲಿಲ್ಲ.
ಮೊದಲಿದ್ದ ಗೋಪುರ ಮುರಿದು ಬೀಳುವ ಸ್ಥಿತಿಯಲ್ಲಿತ್ತು. ಅದಾಗಿಯೂ ಜೀವರಕ್ಷಕ ಸಿಬ್ಬಂದಿ ಅದರ ಅಡಿ ತಮ್ಮ ರಕ್ಷಣಾ ಸಲಕರಣೆಗಳನ್ನಿರಿಸುತ್ತಿದ್ದರು. ಗೋಪುರದ ಮೇಲ್ಬಾಗ ಕುಳಿತು ಅವರು ಸಮುದ್ರ ಚಟುವಟಿಕೆ ವೀಕ್ಷಿಸುತ್ತಿದ್ದರು. ಅಪಾಯದಲ್ಲಿ ಸಿಲುಕಿದವರನ್ನು ತಕ್ಷಣ ರಕ್ಷಿಸಲು ಆ ಗೋಪುರ ಸಹಕಾರಿಯಾಗಿದ್ದು, ಇದೀಗ ಅದು ಇಲ್ಲವಾಗಿದೆ.
ಸದ್ಯ ಜೀವರಕ್ಷ ಸಲಕರಣೆಯನ್ನ ಶುದ್ದ ಕುಡಿಯುವ ನೀರಿನ ಘಟಕದ ಇಕ್ಕಟ್ಟಾದ ಜಾಗದಲ್ಲಿರಿಸಲಾಗಿದೆ. ಜೋರು ಮಳೆ ಬಂದರೆ ಜೀವ ರಕ್ಷಕರು ಛತ್ರಿ ಹಿಡಿದು ಕಾರ್ಯಾಚರಣೆ ಮಾಡುವ ಸ್ಥಿತಿಯಿದೆ. ಬೇಸಿಗೆಯಲ್ಲಿ ಅವರ ನೆತ್ತಿಯ ಮೇಲೆ ಬಿಸಲು ಬೀಳುತ್ತಿದ್ದು, ದಿನವಿಡೀ ಕಡಲತೀರದಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ.
ಇದೆಲ್ಲದರ ನಡುವೆ ಕುಡ್ಲೆ ಕಡಲತೀರದಲ್ಲಿ ನಿರ್ಮಿಸಿದ ವೀಕ್ಷಣಾ ಗೋಪುರ ಸಹ ತುಕ್ಕು ಹಿಡಿದು ತುಂಡಾಗಿದೆ. ಓಂ ಕಡಲತೀರದಲ್ಲಿನ ಗೋಪುರ ಅರ್ಧ ಮರಳಿನಲ್ಲಿ ಹೂತು ಹೋಗಿದೆ. ನಿತ್ಯವೂ ಸಾವಿರಾರು ಪ್ರವಾಸಿಗರು ಬರುವ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಜೀವ ರಕ್ಷಕರ ಜೀವಕ್ಕೆ ಇಲ್ಲಿ ಬೆಲೆಯಿಲ್ಲ ಎಂಬ ಮಾತು ಕೇಳಿಬಂದಿದೆ.