ರಾಜ್ಯದ ಎಲ್ಲಡೆ ಭ್ರಷ್ಟರನ್ನು ಹುಡುಕಿ ಅವರ ಆಸ್ತಿ-ಪಾಸ್ತಿ ಜಪ್ತು ಮಾಡಿರುವ ಲೋಕಾಯುಕ್ತರು ಭ್ರಷ್ಟರ ನೆಂಟರ ಮನೆ-ಮಳಿಗೆ ಮೇಲೆಯೂ ದಾಳಿ ನಡೆಸಿದ್ದಾರೆ. ಹೀಗಾಗಿ ಕುಮಟಾದ ವೈಭವ ಪ್ಯಾಲೇಸ್ ಮೇಲೆಯೂ ಮಂಗಳವಾರ ಲೋಕಾಯುಕ್ತರ ಕಾರ್ಯಾಚರಣೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಎಲ್ ಪಿ ನಾಯ್ಕ ಅವರು ಉಡುಪಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದಾರೆ. ಆರ್ ಟಿ ಓ ಕಚೇರಿಯ ಎಲ್ಲಾ ವ್ಯವಹಾರ ನೋಡಿಕೊಳ್ಳುವ ಅವರು ತಮ್ಮ ಆದಾಯಕ್ಕೂ ಮೀರಿ ಆಸ್ತಿ ಮಾಡಿದ್ದಾರೆ. ಹೀಗಾಗಿ ಎಲ್ ಪಿ ನಾಯ್ಕ ಅವರ ಆಸ್ತಿ ಮೇಲೆ ಲೋಕಾಯುಕ್ತರು ಕಣ್ಣಾಡಿಸಿದ್ದಾರೆ. ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಇದರೊಂದಿಗೆ ಎಲ್ ಪಿ ನಾಯ್ಕ ಅವರು ಬೇನಾಮಿ ಹೆಸರಿನಲ್ಲಿಯೂ ದುಡ್ಡು ಮಾಡಿದ ಅನುಮಾನವಿದ್ದು, ಈ ಹಿನ್ನಲೆ ಅವರ ಆಪ್ತರ ಮನೆ-ಮಳಿಗೆ ಮೇಲೆಯೂ ದಾಳಿ ಮಾಡಿದ್ದಾರೆ.
ಎಲ್ ಪಿ ನಾಯ್ಕ ಅವರ ಬಾವ ಶೈಲೇಶ ನಾಯ್ಕ ಅವರು ಕುಮಟಾದ ನೆಲ್ಲಿಕೇರಿಯಲ್ಲಿದ್ದಾರೆ. ಅವರು ವೈಭವ ಪ್ಯಾಲೇಸ್ ಎಂಬ ಮಳಿಗೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ವೈಭವ ಪ್ಯಾಲೇಸ್ ಹಾಗೂ ಅದರ ಹಿಂದಿರುವ ನಿವಾಸದ ಮೇಲೆ ದಾಳಿ ಮಾಡಿ ವಿವಿಧ ದಾಖಲೆಗಳನ್ನು ಜಪ್ತು ಮಾಡಿದ್ದಾರೆ. ಸಮೀಪದ `ವರುಣ ಆರ್ಕೇಡಾ’ ಮೇಲೆಯೂ ಲೋಕಾಯುಕ್ತರು ದಾಳಿ ಮಾಡಿದ್ದು, ಅಲ್ಲಿಯೂ ಅನೇಕ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಕ್ರಮ ಸಂಪಾದನೆಯ ಸಂಪತ್ತುಗಳ ಹೂಡಿಕೆ ಪತ್ತೆಗಾಗಿ ಈ ದಾಳಿ ನಡೆದಿದೆ.
ಮಂಗಳವಾರ ಸಂಜೆ ದಾಳಿ ಮುಕ್ತಾಯವಾಗಿದ್ದು, ಆ ವೇಳೆ ದೊಡ್ಡ ಬಾಕ್ಸಿನಲ್ಲಿ ಅಧಿಕಾರಿಗಳು ರಾಶಿ ರಾಶಿ ದಾಖಲೆಗಳನ್ನು ಒಯ್ದಿದ್ದಾರೆ. ದಾಳಿ ಅವಧಿಯಲ್ಲಿ ಸಿಕ್ಕಿದ ಅನುಮಾನಾಸ್ಪದ ವಸ್ತು-ವಿಷಯದ ರಹಸ್ಯ ಹೊರಬಿದ್ದಿಲ್ಲ.