ಶಿರಸಿ ಜಾತ್ರೆ ದಿನಾಂಕ ಘೋಷಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹರಿದಾಡುತ್ತಿದ್ದು, ಇದರ ಮೂಲ ಹುಡುಕಾಟ ನಡೆಸಿದಾಗ ಆರ್ಥಿಕ ಸಂಸ್ಥೆಯೊoದರ ತರಾತುರಿಯ ನಿರ್ಧಾರ ಹೊರಬಿದ್ದಿದೆ. 2026ರ ಕ್ಯಾಲೆಂಡರ್ ಪ್ರಕಟಿಸಿದ ಭೂತೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತ ಆ ದಿನದರ್ಶಿಕೆಯಲ್ಲಿ ಫೆ 24ರಿಂದ ಮರ್ಚ 4ರವರೆಗೆ ಶಿರಸಿ ಜಾತ್ರೆ ಎಂದು ನಮೂದಿಸಿದ್ದು, ಅದೇ ಆಧಾರದಲ್ಲಿ ಜಾಲತಾಣಗಳಲ್ಲಿ ಜಾತ್ರೆಯ ಚರ್ಚೆ ಹರಿದಾಡುತ್ತಿದೆ.
ಆರ್ಥಿಕ ಶಿಸ್ತು, ಸ್ನೇಹಮಯ ಆಡಳಿತ ಮಂಡಳಿ ಹಾಗೂ ಉತ್ತಮ ಸಿಬ್ಬಂದಿಯನ್ನು ಹೊಂದಿರುವ ಭೂತೇಶ್ವರ ಪತ್ತಿನ ಸಹಕಾರಿ ಸಂಘವೂ ಈ ಬಾರಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. 25 ವರ್ಷಗಳ ಹಿಂದೆ ವಸಂತ ಶೆಟ್ಟಿ ಅವರು ನೆಟ್ಟ ಗಿಡ ಇದೀಗ ಹೆಮ್ಮರವಾಗಿ ಬೆಳೆದಿದ್ದು, ಭೂತೇಶ್ವರ ಪತ್ತಿನ ಸಹಕಾರಿ ಸಂಘ ಜನರ ವಿಶ್ವಾಸಗಳಿಸಿದೆ. ಮುದ್ದತಿ ಠೇವುಗಳ ಮೇಲೆ ಆಕರ್ಷಕ ಬಡ್ಡಿ, ಸಾಲ ನೀಡುವ ವಿಷಯದಲ್ಲಿಯೂ ಆರೋಗ್ಯಕರ ಪೈಪೋಟಿ ಜೊತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಈ ಸಹಕಾರಿ ಸಂಘ ಮುನ್ನಡೆಯುತ್ತಿದೆ. ಸಂಘ ಶುರುವಿನಿಂದ ಈವರೆಗೂ ಲಾಭದಲ್ಲಿಯೇ ಮುನ್ನಡೆದಿರುವುದರಿಂದ ಜನ ಸಂಘದ ನಡೆ-ನುಡಿಯ ಮೇಲೆ ನಂಬಿಕೆಯಿಟ್ಟಿದ್ದಾರೆ. ಪ್ರತಿ ವರ್ಷ ಕ್ಯಾಲೆಂಡರ್ ಮುದ್ರಿಸುವ ಈ ಸಂಘವೂ 2026ರ ಕ್ಯಾಲೆಂಡರ್’ನ್ನು ಸಹ ಎರಡು ತಿಂಗಳ ಮುಂಚಿತವಾಗಿ ಮುದ್ರಿಸಿದೆ. ಆ ಕ್ಯಾಲೆಂಡರಿನಲ್ಲಿ ಶಿರಸಿ ಜಾತ್ರೆಯ ದಿನಾಂಕ ಬರೆಯಲಾಗಿದ್ದು, ವಿಶ್ವಾಸಾರ್ಹ ಸಹಕಾರಿ ಸಂಘ ನೀಡಿದ ಮಾಹಿತಿಯೇ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಿದಾಡಿದೆ.
`ಯುಗಾದಿ ಹಬ್ಬದ ನಂತರದ ದಿನ ಲೆಕ್ಕಾಚಾರ, ಮುಹೂರ್ತಗಳ ಅಧ್ಯಯನ ಆಧಾರ ಹಾಗೂ ಉನ್ನತ ಮೂಲಗಳ ಮಾಹಿತಿ ಆಧರಿಸಿ ಕ್ಯಾಲೆಂಡರಿನಲ್ಲಿ ಶಿರಸಿ ಜಾತ್ರೆಯ ದಿನಾಂಕ ನಮೂದಿಸಲಾಗಿದೆ. ನಮ್ಮ ಊರಿನ ಹೆಮ್ಮೆಯ ಜಾತ್ರೆಯ ಬಗ್ಗೆ ಅಭಿಮಾನದಿಂದ ಜನರಿಗೆ ಅರಿವು ಮೂಡಿಸುವ ಹಾಗೂ ದೇವಿ ಭಕ್ತರಿಗೆ ಮುಂಚಿತ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ದಿನದರ್ಶಿಕೆಯಲ್ಲಿ ವಿವರ ಬರೆಯಲಾಗಿದೆ. ಅದನ್ನು ಹೊರತುಪಡಿಸಿ ತಪ್ಪು ತಿಳುವಳಿಕೆಯ ಅನ್ಯ ಉದ್ದೇಶಗಳಿಲ್ಲ’ ಎಂದು ಭೂತೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತದ ವ್ಯವಸ್ಥಾಪಕ ವಿನಾಯಕ ಶೇಟ್ ಅವರು ಸ್ಪಷ್ಠಪಡಿಸಿದರು.
`ಜಾತ್ರೆಯ ದಿನಾಂಕ ಅಧಿಕೃತವಾಗಿ ಘೋಷಣೆ ಆಗಿಲ್ಲ. ಪದ್ಧತಿಯ ಪ್ರಕಾರ ರಾಯಸ ಪತ್ರ ಸಿದ್ಧಪಡಿಸಿ ಆ ಮೂಲಕ ಸಾರ್ವಜನಿಕರಿಗೆ ಜಾತ್ರೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪೂಜೆ, ಕಾರ್ಯಕ್ರಮ, ವಿವಾಹ ಮಹೋತ್ಸವ, ರಥೋತ್ಸವ, ವಿಸರ್ಜನೆಯಿಂದ ಪುನರ್ ಪ್ರತಿಷ್ಠೆಯವರೆಗೆ ಪ್ರತಿಯೊಂದು ಮುಹೂರ್ತದ ಬಗ್ಗೆಯೂ ಅಧಿಕೃತವಾಗಿ ಆಗಲೇ ಗೊತ್ತಾಗಲಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯುವುದು ಅಗತ್ಯ. ಈಗಲೇ ಏನನ್ನು ಹೇಳಲು ಅಸಾಧ್ಯ’ ಎಂದು ಮಾರಿಕಾಂಬಾ ದೇವಾಲಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಸುಧೀರ ಹಂಡ್ರಾಲ್ ಅವರು ತಿಳಿಸಿದರು.
ಶಿರಸಿ ಜಾತ್ರೆಯ ಅಧಿಕೃತ ದಿನಾಂಕ ದೇವಾಲಯದ ಆಡಳಿತ ಮಂಡಳಿಯಿoದ ಪ್ರಕಟವಾಗಿಲ್ಲ. ಆದರೆ, ಕ್ಯಾಲೇಂಡರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ದಿನಾಂಕದಲ್ಲಿ ಜಾತ್ರೆ ನಡೆಯಲ್ಲ ಎಂದು ಸಹ ಆಡಳಿತ ಮಂಡಳಿ ಹೇಳಿಲ್ಲ. ಹೀಗಾಗಿ `ಜಾತ್ರೆ ದಿನಾಂಕ ಘೋಷಣೆ ಆಗಿಲ್ಲ’ ಎಂದು ಆಡಳಿತ ಮಂಡಳಿ ಹೇಳಿದ್ದು ಸತ್ಯವಾಗಿದ್ದರೂ `ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದಿನಾಂಕ ಸುಳ್ಳು’ ಎಂದು ದೇವಾಲಯದವರು ಹೇಳಿಲ್ಲ. ಆದ್ದರಿಂದ ಜಾತ್ರೆ ದಿನಾಂಕದ ಬಗ್ಗೆ ದೇವಾಲಯ ಆಡಳಿತ ಆಡಳಿತ ಮಂಡಳಿಯವರು ಪದ್ಧತಿ ಪ್ರಕಾರ ಘೋಷಣೆ ಮಾಡುವುದು ಮಾತ್ರ ಬಾಕಿಯಿದ್ದು, ಅದಕ್ಕೂ ಮುನ್ನ ಸಹಕಾರಿ ಸಂಘ ಕೊಂಚ ಆತುರ ಪ್ರದರ್ಶಿಸಿದ್ದು ಗೊಂದಲಕ್ಕೆ ಕಾರಣವಾಗಿದೆ.