ಹೊನ್ನಾವರದ ಸಂತೋಷ ಗೌಡ ಅವರ ಮನೆ ಅಂಗಳದಲ್ಲಿ ಅಪಾಯಕಾರಿ ರೀತಿ ವಿದ್ಯುತ್ ತಂತಿ ಹಾದುಹೋದ ಬಗ್ಗೆ ಮೂರು ತಿಂಗಳ ಹಿಂದೆಯೇ ಅರಿವಿದ್ದರೂ ಹೆಸ್ಕಾಂ ಅಧಿಕಾರಿ ರಾಮಕೃಷ್ಣ ಭಟ್ಟ ಅವರು ಬೇಜವಬ್ದಾರಿಯಿಂದ ವರ್ತಿಸಿದ್ದು, ಪರಿಣಾಮ ಭಾನುವಾರ ರಾತ್ರಿ ಎರಡು ಜೀವ ಬಲಿಯಾಗಿದೆ. ಅಪಾಯ ಆಗುವ ಮುನ್ಸೂಚನೆ ಇದ್ದ ಬಗ್ಗೆ ಹೇಳಿದರೂ ಬಾರದ ಕಾಸರಕೋಡಿನ ಲೈನ್‌ಮೆನ್ ಅಶೋಕ ಹಾಗೂ ಸೆಕ್ಷನ್ ಆಫಿಸರ್ ಪ್ರಸಾದ ಸಹ ಇದೀಗ ಮರುಕವ್ಯಕ್ತಪಡಿಸುತ್ತಿದ್ದಾರೆ. ಸಣ್ಣ-ಪುಟ್ಟ ಕೆಲಸ ಮಾಡಿಕೊಡಲು ಸಾಧ್ಯವಾಗದ ದೊಡ್ಡ ದೊಡ್ಡ ನಾಯಕರು ಸಾವಿನ ನಂತರ ಸ್ಥಳಕ್ಕೆ ಬಂದು ಅನುಕಂಪಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ!
ಹೊನ್ನಾವರ ಕಾಸರಕೋಡ ಬಟ್ಟೆ ವಿನಾಯಕ ಕೇರಿಯಲ್ಲಿ ಸಂತೋಷ ಗೌಡ ಹಾಗೂ ಸೀತು ಗೌಡ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಅವರ ಮನೆ ಮುಂದೆ ಹಾದುಹೋದ ವಿದ್ಯುತ್ ತಂತಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಗ್ಗೆ ಅವರು ಮೂರು ತಿಂಗಳ ಹಿಂದೆ ಮಾಹಿತಿ ನೀಡಿದ್ದರು.ಈ ಬಗ್ಗೆ ಗ್ರಾ ಪಂ ಸದಸ್ಯ ಚಂದ್ರಹಾಸ ಗೌಡ ಅವರಿಗೆ ವಿಷಯ ಮುಟ್ಟಿಸಿದ್ದು, ಚಂದ್ರಹಾಸ ಗೌಡ ಅವರು ಸಮಸ್ಯೆ ಬಗ್ಗೆ ಹೆಸ್ಕಾಂ ಅಭಿಯಂತರ ರಾಮಕೃಷ್ಣ ಭಟ್ಟ ಅವರಿಗೆ ಫೋನ್ ಮಾಡಿದ್ದರು. ಜೊತೆಗೆ ವಿದ್ಯುತ್ ತಂತಿಯ ಅಪಾಯ ತಪ್ಪಿಸುವಂತೆ ಕಾಸರಕೋಡಿನ ಲೈನ್‌ಮೆನ್ ಅಶೋಕ ಹಾಗೂ ಸೆಕ್ಷನ್ ಆಫಿಸರ್ ಪ್ರಸಾದ ಅವರಿಗೂ ಚಂದ್ರಹಾಸ ಗೌಡ ಅವರು ಮನವಿ ಮಾಡಿದ್ದರು.
ಆದರೆ, ಸರ್ಕಾರಿ ಸಂಬಳಪಡೆಯುವ ಈ ಸಿಬ್ಬಂದಿ – ಅಧಿಕಾರಿ ಅದರ ಜೊತೆ ಬೇರೆ ನಿರೀಕ್ಷೆಯಲ್ಲಿದ್ದ ಕಾರಣ ಸುರಕ್ಷತಾ ಕ್ರಮ ಅನುಸರಿಸಿರಲಿಲ್ಲ. ಅಪಾಯದ ಬಗ್ಗೆ ಅರಿವಿದ್ದರೂ ಜನರ ಜೀವ ಉಳಿಸುವ ಕೆಸ ಮಾಡಿರಲಿಲ್ಲ. `ಅವರಿಗೆ ಅಷ್ಟು ಅರ್ಜಂಟ್ ಇದ್ದರೆ ಏನಾದರೂ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ’ ಎಂದು ಎಂಜಲು ಕಾಸಿಗೆ ಆಸೆಪಡುತ್ತಿದ್ದರು. ಹೀಗಾಗಿಯೇ ಮೂರು ತಿಂಗಳು ಕಳೆದರೂ ಅಪಾಯಕಾರಿ ಸ್ಥಿತಿಯಲ್ಲಿದ್ದ ತಂತಿ ಬದಲಿಸುವ ಕೆಲಸಕ್ಕೆ ಯಾರೂ ಹೋಗಿರಲಿಲ್ಲ. ತುರ್ತು ದುರಸ್ಥಿಯನ್ನು ಮಾಡಿರಲಿಲ್ಲ. ಸ್ಥಳೀಯ ಜನಪ್ರತಿನಿಧಿಯಾಗಿರುವ ಚಂದ್ರಹಾಸ ಗೌಡ ಅವರು ಸಹ ಪದೇ ಪದೇ ಫೋನ್ ಮಾಡಿ ಒತ್ತಾಯಿಸುವುದನ್ನು ಬಿಟ್ಟಿರಲಿಲ್ಲ. ಆದರೆ, ಅವರ ಮಾತಿಗೆ ಹೆಸ್ಕಾಂ ಅಧಿಕಾರಿಗಳು ಮಾತ್ರ ಬೆಲೆ ಕೊಡಲಿಲ್ಲ.
ಭಾನುವಾರ ರಾತ್ರಿ ದಿಢೀರ್ ಆಗಿ ಅಪಾಯಕಾರಿ ರೀತಿಯಲ್ಲಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತು. ಅದನ್ನು ಗಮನಿಸದೇ ತಂತಿ ಸ್ಪರ್ಶಿಸಿದ ಸಂತೋಷ ಗೌಡ ಹಾಗೂ ಸೀತು ಗೌಡ ಅಲ್ಲಿಯೇ ತಮ್ಮ ಪ್ರಾಣಬಿಟ್ಟರು. ಅವರ ಮಗ ನಾಗರಾಜ ಗೌಡ ಸಹ ವಿದ್ಯುತ್ ಆಘಾತದಿಂದ ಆಸ್ಪತ್ರೆ ಸೇರಿದರು. ಈ ವೇಳೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತೆ ಅಲ್ಲಿದ್ದ ಗಣಪತಿ ಗೌಡ ಅವರು ಹೆಸ್ಕಾಂ ಗ್ರಿಡ್’ಗೆ ಫೋನ್ ಮಾಡಿದರು. ಆದರೆ, ಅಲ್ಲಿಯೂ ಫೋನ್ ಸ್ವೀಕರಿಸುವವರು ಸಹ ಗತಿಯಿರಲಿಲ್ಲ. ಹೀಗಾಗಿ ಸಂತೋಷ ಗೌಡ ಹಾಗೂ ಸೀತು ಗೌಡ ಸಾವಿನ ನಂತರವೂ ವಿದ್ಯುತ್ ಆಘಾತ ಅನುಭವಿಸಿದರು. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡಲು ಸಾಧ್ಯವಾಗದ ದೊಡ್ಡ ದೊಡ್ಡ ನಾಯಕರು ಸೋಮವಾರ ಆಸ್ಪತ್ರೆಗೆ ದೌಡಾಯಿಸಿದರು. ಆಡಳಿತ ಪಕ್ಷದಲ್ಲಿರುವವರು ನೊಂದವರಿಗೆ ಸಾಂತ್ವಾನ ಹೇಳಿದರು. ವಿರೋಧ ಪಕ್ಷದಲ್ಲಿರುವವರು ಸರ್ಕಾರದ ನಡೆಯನ್ನು ಖಂಡಿಸಿದರು. ಆದರೆ, ಎರಡು ಜೀವ ಹೋದರೂ ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುವವರು ಯಾರೂ ಕಾಣಲಿಲ್ಲ. ಅಕ್ಕ-ಬಾವನ ಶವದ ಮುಂದೆ ಮಲ್ಲಾಮಸ್ತಿಕೇರಿಯ ಆಟೋ ಚಾಲಕ ಸುಬ್ರಾಯ ಗೌಡ ಕಣ್ಣೀರು ಸುರಿಸುತ್ತಿದ್ದರು.