ವಿದೇಶಿ ನೋಟುಗಳನ್ನು ಅಕ್ರಮವಾಗಿ ವಿನಿಮಯ ಮಾಡುತ್ತಿದ್ದ ಜಾಲವನ್ನು ಭಟ್ಕಳ ಪೊಲೀಸರು ಹಿಡಿದಿದ್ದಾರೆ. ಗೋವಾದಿಂದ ಭಟ್ಕಳಕ್ಕೆ ಸ್ಕೂಟರಿನಲ್ಲಿ ಸಾಗಾಟವಾಗುತ್ತಿದ್ದ 8 ಲಕ್ಷ ರೂ ಮೌಲ್ಯದ 156 ವಿದೇಶಿ ಕರೆನ್ಸಿಯ ನೋಟುಗಳು ಪೊಲೀಸರಿಗೆ ಸಿಕ್ಕಿದೆ.
ಭಟ್ಕಳದ ಚಿನ್ನದಪಳ್ಳಿ ಬಳಿಯ ಹೌಸ್ ಮುಸ್ಟಾ ಸ್ಟಿಟ್ ರುಕ್ಮುದ್ದಿನ್ ಸುಲ್ತಾನ್ ಭಾಷಾ ಅವರು THE UNITED STATES OF AMERICA ಎಂದು ಬರೆದ ನೋಟುಗಳನ್ನು ಸಾಗಿಸುತ್ತಿದ್ದರು. ಅಕ್ಟೊಬರ್ 22ರ ರಾತ್ರಿ ಭಟ್ಕಳದ ಪೊಲೀಸ್ ನಿರೀಕ್ಷಕ ದಿವಾಕರ ಪಿ ಎಂ ಅವರು ರುಕ್ಮುದ್ದಿನ್ ಸುಲ್ತಾನ್ ಭಾಷಾ ಅವರ ಸ್ಕೂಟರ್ ತಪಾಸಣೆ ನಡೆಸಿದರು. ಆಗ ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟ ಪ್ರಕರಣ ಬೆಳಕಿಗೆ ಬಂದಿತು.
ಈ ನೋಟುಗಳ ಸಾಗಾಣಿಕೆಗೆ ಪರವಾನಿಗೆ ಒದಗಿಸುವಂತೆ ಪೊಲೀಸರು ಕೋರಿದರು. ಆದರೆ, ರುಕ್ಮುದ್ದಿನ್ ಸುಲ್ತಾನ್ ಭಾಷಾ ಅವರ ಬಳಿ ಯಾವುದೇ ಅನುಮತಿ ಪತ್ರಗಳಿರಲಿಲ್ಲ. ಪೊಲೀಸರು ತೀವೃವಾಗಿ ವಿಚಾರಣೆ ನಡೆಸಿದಾಗ ಈ ನೋಟುಗಳನ್ನು ಭಟ್ಕಳದ ಕಪ್ಪಾ ಮಜೀದ್ ಅವರಿಗೆ ಕೊಡಲು ತಂದಿರುವುದಾಗಿ ಅವರು ಬಾಯ್ಬಿಟ್ಟರು.
ರುಕ್ಮುದ್ದಿನ್ ಸುಲ್ತಾನ್ ಭಾಷಾ ಹಾಗೂ ಕಪ್ಪಾ ಮಜೀದ್ ಯಾವ ಉದ್ದೇಶಕ್ಕಾಗಿ ವಿದೇಶಿ ನೋಟುಗಳ ಹಿಂದೆ ಬಿದ್ದಿದ್ದಾರೆ? ಎನ್ನುವುದರ ಬಗ್ಗೆ ವಿಚಾರಣೆ ನಡೆಯುತ್ತಿದೆ. ಪೊಲೀಸರು ಅವರಿಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.